ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು, ಮೂವರು ವಿದೇಶಿಯರು ಸೇರಿ 15 ಮಂದಿಯನ್ನು ಬಂಧಿಸಿ ಬರೋಬ್ಬರಿ 21.50 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ. ನಗರ, ಶೇಷಾದ್ರಿಪುರ, ಮಹಾಲಕ್ಷ್ಮೀ ಲೇಔಟ್ ಹಾಗೂ ಗೋವಿಂದಪುರ ಠಾಣೆ ಪೊಲೀಸರು ಈ ದಾಳಿ ನಡೆಸಿದ್ದು, ಬಂಧಿತರಿಂದ 9.4 ಕೆಜಿ ಹೈಡ್ರೋ ಗಾಂಜಾ, 5.6 ಕೆಜಿ ಎಂಡಿಎಂಎ, 34 ಕೆಜಿ ಗಾಂಜಾ, 131 ಗ್ರಾಂ ಕೊಕೇನ್‌, 462 ಮಿಲಿ ಹ್ಯಾಶಿಶ್ ಆಯಿಲ್‌, 29 ಎಲ್‌ಎಸ್‌ಡಿ ಫಿಲ್ಸ್‌, 27 ಗ್ರಾಂ ಎಲ್‌ಎಸ್‌ಡಿ ಸ್ಟ್ರಿಪ್ಸ್‌ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯವು 21.50 ಕೋಟಿ ರು. ಇದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ ತಿಳಿಸಿದ್ದಾರೆ.

ಹೆಚ್ಚಿನ ಹಣ ಗಳಿಸುವ ಸಲುವಾಗಿ ವಿದೇಶ ಹಾಗೂ ಹೊರ ರಾಜ್ಯಗಳಿಂದ ಡ್ರಗ್ಸ್ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಸಿಸಿಬಿ ಬೇಟೆ: ₹5 ಕೋಟಿ ಡ್ರಗ್ಸ್ ಜಪ್ತಿ


ಬಟ್ಟೆ ವ್ಯಾಪಾರ ಸೋಗಿನಲ್ಲಿ ಡ್ರಗ್ಸ್ ದಂಧೆಗಿಳಿದಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ನೈಜೀರಿಯಾ ಮೂಲದ ಇಬ್ರಾಹಿಂ ಬಕಯೊಕು ಬಂಧಿತನಾಗಿದ್ದು, ಆರೋಪಿಯಿಂದ 5.7 ಕೋಟಿ ರು. ಮೌಲ್ಯದ ಎಡಿಎಂಎ ಜಪ್ತಿಯಾಗಿದೆ. 2015ರಲ್ಲಿ ಬಟ್ಟೆ ವ್ಯಾಪಾರದ ನೆಪದಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಇಬ್ರಾಹಿಂ ಡ್ರಗ್ಸ್ ದಂಧೆಗಿಳಿದ್ದ. 2019ರಲ್ಲೇ ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಹೀಮಾಚಲ ಪ್ರದೇಶದ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆನಂತರ ಜಾಮೀನು ಪಡೆದು ಹೊರಬಂದ ಆತ, ಅಲ್ಲಿಂದ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಬಳಿ ನೆಲೆಸಿದ್ದ. ಹೊರರಾಜ್ಯದಿಂದ ಡ್ರಗ್ಸ್ ತಂದು ನಗರದಲ್ಲಿ ಇಬ್ರಾಹಿಂ ಬಿಕರಿ ಮಾಡುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿಲ್ಸನ್ ಗಾರ್ಡನ್ ಬಳಿ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್‌ ಕಾಸಿಂ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಕೆ. ಮಹಾನಂದ ಹಾಗೂ ಮಂಜಪ್ಪ ಸಾರಥ್ಯದ ತಂಡವು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಬ್ಬ ವಿದೇಶಿ ಪ್ರಜೆ

ಹೆಬ್ಬಗೋಡಿ ಪೊಲೀಸರ ಬಲೆಗೆ ಬಿದ್ದ ಮತ್ತೊಬ್ಬ ವಿದೇಶಿ ಪ್ರಜೆ ಬಳಿ 1.5 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.

ವರ್ತೂರು ನಿವಾಸಿ ಯಾಯಾ ಬ್ಯಾರಿ ಅಲಿಯಾಸ್ ಒಕೋಲಿಯಾ ಎಮೆಕ್ ಬಂಧಿತನಾಗಿದ್ದು, ಆರೋಪಿಯಿಂದ 546 ಗ್ರಾಂ ಎಡಿಎಂಎ, 131 ಕೊಕೇನ್‌, 152 ಗ್ರಾಂ ಹೈಡ್ರೋ ಗಾಂಜಾ ಹಾಗೂ ಎಲ್‌ಎಸ್‌ಡಿ ಸೇರಿ 1.5 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮೂಲತಃ ಸೆನೆಗಲ್ ದೇಶದವನಾಗಿದ್ದು, ಮೂರು ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಥೈಲ್ಯಾಂಡ್ ಪ್ರವಾಸಿಗರ ಬಳಿ 5 ಕೋಟಿ ಡ್ರಗ್ಸ್

ಪ್ರವಾಸದ ನೆಪದಲ್ಲಿಥೈಲ್ಯಾಂಡ್ ದೇಶಕ್ಕೆ ಹೋಗಿ ಅಲ್ಲಿಂದ ಅಕ್ರಮವಾಗಿ ಡ್ರಗ್ಸ್ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೋರಾಯನಪಾಳ್ಯದ ಅಜ್ಮಲ್‌ ಹಾಗೂ ಮಜೀಬ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಕೋಟಿ ರು. ಮೌಲ್ಯದ 5.030 ಕೆಜಿ ಹೈಡ್ರೋ ಗಾಂಜಾ, ಮೊಬೈಲ್‌ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಕಾಫಿ ಬೋರ್ಡ್‌ ಲೇಔಟ್‌ನಲ್ಲಿರುವ ಶೂಟಿಂಗ್ ಮನೆಗಳ ಬಳಿ ರಸ್ತೆ ಬದಿ ಕಾರಿನಲ್ಲಿ ಡ್ರಗ್ಸ್ ಮಾರಾಟಕ್ಕೆ ಇಬ್ಬರು ಯತ್ನಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಮುರುಗೇಂದ್ರಯ್ಯ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ.ಅಂಬರೀಷ್ ಹಾಗೂ ಕೆ.ಎಲ್‌. ಪ್ರಭು ನೇತೃತ್ವದ ತಂಡು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಇಬ್ಬರು ಪೆಡ್ಲರ್‌ಗಳು ಮೂಲತಃ ಕೇರಳದವರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಅವರು ನೌಕರಿಯಲ್ಲಿದ್ದರು. ಪ್ರವಾಸದ ಸೋಗಿನಲ್ಲಿ ಥೈಲ್ಯಾಂಡ್‌ಗೆ ತೆರಳಿ ಅಲ್ಲಿಂದ ಹೈಡ್ರೋ ಗಾಂಜಾವನ್ನು ಅಜ್ಮಲ್‌ ಹಾಗೂ ಮುಜೀಬ್ ತಂದಿದ್ದರು. ಬಳಿಕ ಕೋರಮಂಗಲ, ಬೇಗೂರು, ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಸ್‌ಆರ್ ಲೇಔಟ್‌ ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇಷಾದ್ರಿಪುರ ಪೊಲೀಸರಿಗೆ ಗಾಳಕ್ಕೆ ಬಿದ್ದ ಮತ್ತೊಬ್ಬ ಕೇರಳ ಮೂಲದ ಕ್ಯಾಬ್ ಚಾಲಕ ಕಾಸಿಂ ಬಳಿ 60 ಲಕ್ಷ ರು. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಕೇರಳ ರಾಜ್ಯದ ಕಾಸರಗೂಡಿನಿಂದ ಗಾಂಜಾ ತಂದು ನಗರದಲ್ಲಿ ಆತ ಮಾರಾಟಕ್ಕೆ ಯತ್ನಿಸಿದ್ದ. ಇನ್ನು ಜೆ.ಬಿ. ನಗರ ಪೊಲೀಸರಿಗೆ ಸಿಕ್ಕಿಬಿದ್ದ ಐವರು ಕೇರಳಿಗರ ಬಳಿ 87 ಲಕ್ಷ ರು. ಮೌಲ್ಯದ ಹೈಡ್ರೋ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಫುಟ್ಬಾಲ್ ಆಟಗಾರ ಪೆಡ್ಲರ್!

ಫುಟ್ಬಾಲ್ ಆಟದ ನೆಪದಲ್ಲಿ ನಗರಕ್ಕೆ ಬಂದು ಡ್ರಗ್ಸ್ ಪೆಡ್ಲರ್ ಆಗಿದ್ದ ವಿದೇಶಿ ಪ್ರಜೆಯೊಬ್ಬ ಗೋವಿಂದಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೈಜೀರಿಯಾ ಮೂಲದ ಡೇನಿಯಲ್ ಬಂಧಿತನಾಗಿದ್ದು, ಆರೋಪಿ ಬಳಿ 11 ಲಕ್ಷ ರು. ಮೌಲ್ಯದ 56 ಗ್ರಾಂ ಎಡಿಎಂಎ ಜಪ್ತಿಯಾಗಿದೆ. ಪೂರ್ವ ವಿಭಾಗದ ವ್ಯಾಪ್ತಿಯ ಪ್ರತಿಷ್ಠಿತ ಪುಟ್ಬಾಲ್ ಕ್ಲಬ್‌ನಲ್ಲಿ ಆತನ ಪ್ರಮುಖ ಆಟಗಾರನಾಗಿದ್ದ. ನೈಜೀರಿಯಾ ದೇಶದಿಂದ ಪುಟ್ಬಾಲ್‌ ನೆಪದಲ್ಲಿ ಬಂದಿದ್ದ ಡೇನಿಯಲ್‌, ಹಣದಾಸೆಗೆ ಡ್ರಗ್ಸ್ ದಂಧೆಗಿಳಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಕಿರಣ್ ನೇತೃತ್ವದ ತಂಡ ಬಂಧಿಸಿದೆ.