ಮಳವಳ್ಳಿಯಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮದ ಆಲೋಚನೆ ಮಾಡಿದ ಶ್ರೀಗಳ ಮನಸ್ಸು ತುಂಬಾ ವಿಶಾಲವಾಗಿದೆ. ಶ್ರೀ ಮಠಗಳ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಲಕ್ಷಾಂತರ ಬಡ ಕುಟುಂಬದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಅವರ ಜೀವನ ರೂಪಿಸುವಲ್ಲಿ, ಸಮಾಜದ ಮುಖ್ಯವಾಹಿನಿಗೆ ಬರಲು ಶ್ರೀ ಮಠಗಳ ಸೇವೆ ಅಪಾರವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ದಾಸೋಹ ನೀಡುವ ಜೊತೆಗೆ ಜನರಿಗೆ ಆರೋಗ್ಯ ಶಿಬಿರದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಸಮಾಜ ನಿರ್ಮಿಸುವಲ್ಲಿ ಸುತ್ತೂರು ಮಠ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ಲಾಘಿಸಿದರು.
ಸುತ್ತೂರು ಮಠವು 350ಕ್ಕೂ ಅಧಿಕ ಸಂಸ್ಥೆಗಳನ್ನು ಒಳಗೊಂಡು ಸರ್ಕಾರದ ಸೇವೆಗಳನ್ನು ಮೀರಿ ಸಾಧನೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ರಾಷ್ಟ್ರ ಮಟ್ಟದಲ್ಲಿ ಗೌರವ ತಂದುಕೊಟ್ಟಿದೆ. ತಾತ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ ನಮ್ಮ ಕುಟುಂಬ 65 ವರ್ಷದ ರಾಜಕೀಯದಲ್ಲಿ ಸುತ್ತೂರು ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.ಮಳವಳ್ಳಿಯಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮದ ಆಲೋಚನೆ ಮಾಡಿದ ಶ್ರೀಗಳ ಮನಸ್ಸು ತುಂಬಾ ವಿಶಾಲವಾಗಿದೆ. ಶ್ರೀ ಮಠಗಳ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಭಾರತ ದೇಶದ ಶಕ್ತಿ ಯುವ ಸಮೂಹವಾಗಿದೆ. ಶೇ.65ರಷ್ಟು ಯುವ ಜನತೆ ದೇಶವನ್ನು ಪ್ರತಿನಿಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದ ಬೆಳವಣಿಗೆಯನ್ನು ಗಮನಿಸಿದಾಗ ಬಹುತೇಕ ಯುವಕರಿಗೆ ಉದ್ಯೋಗ ದೊರೆಯದಿರುವುದು ಬೇಸರ ಮೂಡಿಸಿದೆ. ಯುವ ಸಮುದಾಯ ಸ್ವಾವಲಂಬಿ ಜೀವನ, ಸ್ವ ಉದ್ಯೋಗ ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.