ಬಾಗೇಪಲ್ಲಿ: ವೀಸಾ ಅವಧಿ ಮುಗಿದ್ದಿದ್ದರೂ ಆಕ್ರಮವಾಗಿ ಭಾರತದಲ್ಲಿ ನೆಲಸಿದ್ದ ಆರೋಪದಡಿಯಲ್ಲಿ ಪಾಕಿಸ್ತಾನ್ ಮೂಲದ ತಾಯಿ ಮತ್ತು ಪುತ್ರನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ದೇವರಗುಡಿಪಲ್ಲಿ ಗ್ರಾ.ಪಂ ವ್ಯಾಪ್ತಿಯ ದಾಸಯ್ಯಗಾರಿಪಲ್ಲಿ ಗ್ರಾಮದಲ್ಲಿ ಆಕ್ರಮವಾಗಿ ನೆಲಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ತಹಸೀಲ್ದಾರ್ ಮನೀಷಾ ಎನ್. ಪತ್ರಿ ಅವರು ಗ್ರಾಮಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅವರು ಪಾಕಿಸ್ತಾನ್ ಪೌರತ್ವ ಹೊಂದಿರುವುದು ಖಚಿತಪಡಿಸಿಕೊಂಡು ನಂತರ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪಾಕಿಸ್ತಾನ್ ಮೂಲದ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ ಖಾನ್ ರವರನ್ನು ಬಾಗೇಪಲ್ಲಿ ಪೊಲೀಸರು ಬಂಧಿರುವುದಾಗಿ ತಿಳಿದು ಬಂದಿದೆ.

ತಾಲೂಕಿನ ದೇವರಗುಡಿಪಲ್ಲಿ ಗ್ರಾ.ಪಂ ವ್ಯಾಪ್ತಿಯ ದಾಸಯ್ಯಗಾರಿಪಲ್ಲಿ ಗ್ರಾಮದ ನಿವಾಸಿಯಾಗಿರುವ ಅಯೂಬ್ ಖಾನ್ 1993ರಲ್ಲಿ ದುಬಾಯ್‍ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಫರ್ಹಾನಾಜ್‍ರವರು ಪರಿಚಯವಾಗಿ 2003ರಲ್ಲಿ ಆಕೆಯನ್ನು ವಿವಾಹವಾಗಿದ್ದರು.

ಈ ದಂಪತಿಗೆ ಒಬ್ಬ ಮಗ ಪಾಕಿಸ್ತಾನದಲ್ಲಿ ಹುಟ್ಟಿರುವುದಾಗಿ ಉಳಿದ ಇಬ್ಬರು ಮಕ್ಕಳು ದುಬಾಯ್‍ನಲ್ಲಿ ಹುಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ಇವರು ಭಾರತಕ್ಕೆ ಬಂದು ಭಾರತ ಪೌರತ್ವ ಪಡೆಯದೆ ಭಾರತದ ಪ್ರಜೆಗಳಲ್ಲದಿದ್ದರೂ ಸಹ ಬೆಂಗಳೂರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪಡೆದು ನಂತರದ ದಿನಗಳಲ್ಲಿ ಬಾಗೇಪಲ್ಲಿಗೆ ವರ್ಗಾಯಿಸಿಕೊಂಡ ನಂತರ ಪಡಿತರ ಚೀಟಿ ಹಾಗೂ ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಆಕ್ರಮವಾಗಿ ಪಡೆದುಕೊಂಡಿರುವ ಆರೋಪ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ.