ಕನ್ನಡಪ್ರಭ ವಾರ್ತೆ ಹಿರಿಯೂರು
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸಿ ಗಣತಿ ನಮೂನೆ ಸರಿಯಾಗಿ ಭರ್ತಿ ಮಾಡುವ ಬಗ್ಗೆ ತಿಳಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ರಾಜುಗೌಡ ಹೇಳಿದರು.ನಗರದ ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಮತ ಪರಿಷ್ಕರಣೆ ಬಿಎಲ್‌ಎ-2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಬೂತ್ ಮಟ್ಟದಲ್ಲಿ ಎಲ್ಲಾ ವರ್ಗದವರು ಸೇರಿದಂತೆ ಬೂತ್ ಕಮಿಟಿ ರಚನೆ ಮಾಡಿಕೊಂಡು ಎಸ್‌ಐಆರ್ ಬಗ್ಗೆ ತಿಳಿದುಕೊಂಡು ಕ್ಷೇತ್ರದಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಮತದಾರರ ಜತೆಗೆ ಉತ್ತಮ ಭಾಂಧವ್ಯ ಬೆಳೆಸಿಕೊಳ್ಳಬೇಕು. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.ಜೆಡಿಎಸ್ ಹಿರಿಯ ಮುಖಂಡ ಎಂ.ರವೀoದ್ರಪ್ಪ ಮಾತನಾಡಿ, ಇದೊಂದು ವಿಶೇಷ ಆಂದೋಲನ. ಹಿರಿಯೂರು ಜೆಡಿಎಸ್‌ನ ಭದ್ರಕೋಟೆಯಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಉಪ ಚುನಾವಣೆಗೆ ಪಕ್ಷ ಸಂಘಟಿಸಬೇಕು. ಜೆಡಿಎಸ್ ಪಕ್ಷ ಒಂದು ಕುಟುಂಬವಿದ್ದಂತೆ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬದಿಗೊತ್ತಿ ನಮ್ಮ ಅವಧಿಯ ಸರ್ಕಾರದ ಸಾಧನೆ ಬಗ್ಗೆ ಜನತೆಗೆ ಅರಿವು ಮೂಡಿಸಬೇಕು. ಉಪ ಚುನಾವಣೆಯು ಅಳಿವು-ಉಳಿನ ಪ್ರಶ್ನೆಯಾಗಿದ್ದು ಎಲ್ಲರೂ ಪಕ್ಷದ ಗೆಲುವಿಗೆ ಪಣ ತೊಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ತಾಲೂಕು ಅಧ್ಯಕ್ಷ ಹನುಮತರಾಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ, ಕಾರ್ಯಾಧ್ಯಕ್ಷ ಜಲ್ದಪ್ಪ, ಹಿರಿಯ ಮುಖಂಡ ಕೆ.ಶಂಕರಮೂರ್ತಿ, ಗುಣಶೇಖರ್, ಪೂಜಾರ್ ತಿಮ್ಮಯ್ಯ, ಗೋವಿಂದರಾಜು ಸೇರಿದಂತೆ ಎಲ್ಲಾ ಬೂತ್ ಏಜೆಂಟರು ಕಾರ್ಯಕರ್ತರು ಹಾಜರಿದ್ದರು.