ಉಡುಪಿ: ನಗರದ ಪ್ರತಿಷ್ಠಿತ ವ್ಯಕ್ತಿಯೊಬ್ಬರಿಗೆ ಪಾಲುದಾರಿಕೆಯ ಬಿಸಿನೆಸ್ ನೆಪದಲ್ಲಿ 70 ಲಕ್ಷ ರು. ಪಡೆದು, ನಂತರ ಅವರ ಖಾಸಗಿ ಫೋಟೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿ ವಂಚಿಸಿದ್ದ ಆರೋಪಿ ಪಡುಬಿದ್ರಿ ಮೂಲದ ಜೀನತ್ (41) ಎಂಬಾಕೆಯ ವಿರುದ್ಧ ಮತ್ತೆ 2 ವಂಚನೆಯ ಪ್ರಕರಣಗಳ‍ು ದಾಖಲಾಗಿವೆ.

ಇನ್ನೂ ಅನೇಕ ಮಂದಿಗೆ ಆಕೆಯಿಂದ ಇದೇ ರೀತಿ ವಂಚನೆಗೊಳಗಾಗಿದ್ದು, ಆಕೆಯ ವಿರುದ್ದ ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆಗಳಿವೆ.

2ನೇ ಪ್ರಕರಣದಲ್ಲಿ ಮಣಿಪಾಲದ ವ್ಯಕ್ತಿಯೊಬ್ಬರು ದೂರು ನೀಡಿದ್ದು, 2020ರಲ್ಲಿ ಜೀನತ್‌ ತನಗೆ ತುರ್ತಾಗಿ 50 ಲಕ್ಷ ರು. ಬೇಕು, ತನಗೆ ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರು. ಸಾಲ ಮಂಜೂರಾಗಿದ್ದು, ಅದು ಸಿಕ್ಕಿದ ಕೂಡಲೇ 50 ಲಕ್ಷ ರು.ಗಳನ್ನು ಹಿಂದಕ್ಕೆ ಕೊಡುವುದಾಗಿ ನಂಬಿಸಿದ್ದಳು. ಅದರಂತೆ ತಾನು 148 ಗ್ರಾಂ ಚಿನ್ನವನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು 50 ಲಕ್ಷ ರು. ಆಕೆಗೆ ನೀಡಿದ್ದು, ಇಷ್ಟು ವರ್ಷವಾದರೂ ತಮ್ಮ ಹಣ ವಾಪಾಸು ಕೊಟ್ಟಿಲ್ಲ, ಕೇಳಿದರೆ ಅವಾಚ್ಯವಾಗಿ ಬೈದು, ಪೊಲೀಸರಿಗ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ಉಡುಪಿ ಬನ್ನಂಜೆಯ ವ್ಯಕ್ತಿಯೊಬ್ಬರು ದೂರು ನೀಡಿದ್ದು, 2018 ರಿಂದ 2022 ರವರೆಗೆ ತಾನು ಉಡುಪಿಯಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿ ನಡೆಸುತಿದ್ದು, ಅಲ್ಲಿಗೆ ಬಂದ ಯನ್ನು ಝೀನತ್ ತನ್ನೊಂದಿಗೆ ಸೆಲ್ಪಿ - ವಿಡಿಯೋ ಮಾಡಿಕೊಂಡಿದ್ದಳು. ನಂತರ ತಾನು ಕೇಳಿದಾಗೆಲ್ಲ ಹಣವನ್ನು ಕೊಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋವನ್ನು ವೈರಲ್ ಮಾಡಿ, ನಿಮ್ಮ ಮರ್ಯಾದೆ ತೆಗೆಯುತ್ತೇನೆ, ನಿಮ್ಮ ಮೇಲೆ ರೇಪ್ ಕೇಸ್ ಕೊಟ್ಟು ಜೈಲಿಗೆ ಕಳಿಸುತ್ತೇನೆ ಎಂದು ಬ್ಲಾಕ್ ಮೇಲ್ ಹಂತಹಂತವಾಗಿ 36,84,000 ರು. ಪಡೆದುಕೊಂಡಿದ್ದಾಳೆ, ಅಲ್ಲದೇ ಆಕೆಯ ಗೆಳತಿ ಗೀತಾ ರಾವ್‌ ಕೂಡ ಬ್ಲ್ಯಾಕ್ ಮೇಲ್ ಮಾಡಿ 15,00,000 ರು. ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು, ಕೆಲವು ಬ್ಯಾಂಕ್‌ ಚೆಕ್‌ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆಕೆಯನ್ನು ಬಂಧಿಸಿದ್ದು, 5 ದಿನಗಳ ಕಸ್ಟಡಿಗೆ ಪಡೆದು ತನಿಖೆ ನಡೆಸಿದಾಗ, ಆಕೆಯ ಪೆನ್‌ಡ್ರೈವ್‌ನಲ್ಲಿ ಕೆಲ ವ್ಯಕ್ತಿಗಳ ಖಾಸಗಿ ಅಶ್ಲೀಲ ವಿಡಿಯೋ ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ಅದರಂತೆ ಆಕೆ ಇನ್ನೂ ಹಲವು ಜನರಿಗೆ ವಂಚಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.