ವಿಶೇಷ ವರದಿ
ಬಳ್ಳಾರಿ: ರಸ್ತೆ ಅಪಘಾತಗಳಲ್ಲಿ ಜೀವಹಾನಿ ತಡೆಗಟ್ಟುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಪೊಲೀಸ್ ಇಲಾಖೆ, ನಿರ್ಲಕ್ಷ್ಯ ವಹಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.ಕಳೆದ ಒಂದು ತಿಂಗಳಿನಿಂದ ಜಾಗೃತಿ ಅಭಿಯಾನ ನಡೆಸಿದ ಬಳಿಕ ಸೋಮವಾರದಿಂದ ಹೆಲ್ಮೆಟ್ ಧರಿಸದೇ ಸಂಚರಿಸುವ ವಾಹನ ಸವಾರರ ವಿರುದ್ಧ ದಂಡ ವಿಧಿಸುವ ಕಾರ್ಯಾಚರಣೆಗೆ ಸೋಮವಾರ ಚಾಲನೆ ದೊರೆತಿದೆ.
ನಗರದ ಪ್ರಮುಖ ರಸ್ತೆ, ವೃತ್ತಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದು ದಂಡ ವಿಧಿಸಿದರಲ್ಲದೆ, ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದವರಿಗೆ ಸಂಚಾರ ಪೊಲೀಸರು ಕಾನೂನಿನ ಪಾಠ ಮಾಡಿದರು.ಹೆಲ್ಮೆಟ್ ಇಲ್ಲದೇ ಸಾವಿನ ಸಂಖ್ಯೆ ಹೆಚ್ಚಳ:
ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣದಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ತಲೆಗೆ ಗಂಭೀರ ಗಾಯಗಳಾಗುವುದೇ ಬಹುತೇಕ ಸಾವುಗಳಿಗೆ ಕಾರಣವಾಗುತ್ತಿದೆ. ಅಪಘಾತ ಸಂಭವಿಸಿದ ಕ್ಷಣದಲ್ಲಿ ಹೆಲ್ಮೆಟ್ ಜೀವ ರಕ್ಷಕ ಕವಚವಾಗಿ ಕಾರ್ಯ ನಿರ್ವಹಿಸುವುದರಿಂದ ಅದರ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
"ಇದು ದಂಡ ವಸೂಲಿಗಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲ. ಜನರ ಜೀವ ರಕ್ಷಣೆ ನಮ್ಮ ಮೊದಲ ಆದ್ಯತೆ. ಹೆಲ್ಮೆಟ್ ಧರಿಸುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಬಳಕೆ ಸಾವಿನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನಾವು ಏಕಾಏಕಿ ದಂಡ ಪ್ರಯೋಗಕ್ಕೆ ಮುಂದಾಗುವುದಿಲ್ಲ. ಕಳೆದ ಒಂದು ತಿಂಗಳಿನಿಂದಲೂ ಜನರಿಗೆ ಜಾಗೃತಿ ಕಾರ್ಯಕ್ರಮ ಮಾಡಿದ್ದೇವೆ. ಇಷ್ಟಾಗಿಯೂ ಹೆಲ್ಮೆಟ್ ಧರಿಸದೇ ಓಡಾಡುವವರ ವಿರುದ್ಧ ಪೂರಕ ಕ್ರಮ ವಹಿಸುತ್ತೇವೆ " ಎಂದು ಪೊಲೀಸರು ಕನ್ನಡಪ್ರಭಕ್ಕೆ ತಿಳಿಸಿದರು.
ಆರಂಭ ಶೂರತ್ವ ಆಗದಿರಲಿ:ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ನಗರದ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಿಯಮಗಳನ್ನು ಪಾಲಿಸುವ ವಾಹನ ಸವಾರರು, ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಗತ್ಯ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಕ್ರಮವನ್ನು ಸ್ವಾಗತಿಸಿರುವ ನಗರದ ನಾಗರಿಕರು, ಪೊಲೀಸರು ಆರಂಭ ಶೂರತ್ವ ತೋರಿಸಬಾರದು. ಈ ಹಿಂದಿನ ಎಸ್ಪಿಗಳು ಸಹ ಹೆಲ್ಮೆಟ್ ಇಲ್ಲದೇ ಓಡಾಡುವವರ ವಿರುದ್ಧ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದರು. ಆದರೆ, ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಕೈಬಿಟ್ಟರು. ಈ ಬಾರಿಯಾದರೂ ನಿರಂತರ ಮೇಲ್ವಿಚಾರಣೆ ಹಾಗೂ ಕಟ್ಟುನಿಟ್ಟಿನ ಜಾರಿ ಜರುಗುವಂತಾಗಲಿ. ಎಸ್ಪಿ ಸುಮನ್ ಡಿ.ಪನ್ನೇಕರ್ ಕಟ್ಟುನಿಟ್ಟಿನ ಅಧಿಕಾರಿ ಎಂದು ಹೆಸರಾಗಿದ್ದು ಹೆಲ್ಮೆಟ್ ಬಳಕೆ ವಿಚಾರದಲ್ಲಿ ಯಾರ ಪ್ರಭಾವ, ಒತ್ತಡಕ್ಕೆ ಮಣಿಯದೆ ಕಾರ್ಯ ನಿರ್ವಹಿಸುವಂತಾಗಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ರಸ್ತೆ ಸುರಕ್ಷತೆಯತ್ತ ಮಹತ್ವದ ಹೆಜ್ಜೆಯಾಗಿದ್ದು, ಈ ಕಾರ್ಯಾಚರಣೆ ಜನರಲ್ಲಿ ಸುರಕ್ಷತಾ ಪ್ರಜ್ಞೆ ಮೂಡಿಸಿದರೆ ಮಾತ್ರ ಅದರ ನಿಜವಾದ ಉದ್ದೇಶ ಸಾರ್ಥಕವಾಗಲಿದೆ. ದಂಡದ ಭಯಕ್ಕಿಂತ ಜೀವದ ಮೌಲ್ಯವೇ ಜನರನ್ನು ಹೆಲ್ಮೆಟ್ ಧರಿಸುವಂತೆ ಮಾಡುವ ದಿನಗಳು ಬರಬೇಕಿದೆ.
ಬಿಸಿಲೂರು ಎಂಬ ಕಾರಣಕ್ಕೆ ಹೆಲ್ಮೆಟ್ ಕಡ್ಡಾಯ ವಿಚಾರದಲ್ಲಿ ಯಾವುದೇ ರಿಯಾಯಿತಿ ಇಲ್ಲ. ಜನರ ಜೀವ ರಕ್ಷಣೆ ನಮ್ಮ ಹೊಣೆ. ಹೆಲ್ಮೆಟ್ ಕಡ್ಡಾಯಗೊಳಿಸಿದ್ದೇವೆ. ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯುವುದಿಲ್ಲ. ಬಳ್ಳಾರಿ ಬಳಿಕ ತಾಲೂಕು ಕೇಂದ್ರಗಳಲ್ಲೂ ಹೆಲ್ಮೆಟ್ ಕಡ್ಡಾಯಗೊಳಿಸುತ್ತೇವೆ ಎನ್ನುತ್ತಾರೆ ಎಸ್ಪಿ ಸುಮನ್ ಡಿ.ಪನ್ನೇಕರ್.