ಸಾರಾಂಶ
ಮುಂಡರಗಿ: ದೇಶದಲ್ಲಿಯೇ ಕರ್ನಾಟಕ ಹಲವು ವೈವಿದ್ಯಮಯ ಸಂಸ್ಕೃತಿ ಕಲೆ,ಸಾಹಿತ್ಯ, ಶಿಕ್ಷಣಕ್ಕೆ ಮಹಾನ್ ಕೊಡುಗೆ ನೀಡಿದ ಮಹನೀಯರು ಇದ್ದಾರೆ, ಅವರಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜ ಶೈಕ್ಷಣಿಕ ಕೊಡುಗೆ ಅಪಾರ ಎಂದು ಜೆ.ಎ.ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ ಹೇಳಿದರು.
ಅವರು ಪಟ್ಟಣದ ಜ.ಅ.ಪಿಯು ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆ ಆಶ್ರಯದಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಡಿನ ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಕಸಾಪ ಮಾಡುತ್ತಿದೆ, ಸಂಸ್ಥಾನದ ಲಿಂಗರಾಜರು ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲಿಯೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಾವಿರು ಕೋಟಿ ಬೆಲೆ ಬಾಳುವ ಆಸ್ತಿ ದಾನವಾಗಿ ಕೊಟ್ಟವರು. ಈಗಿನ ಪ್ರತಿಷ್ಠಿತ ಕೆಎಲ್‌ಇ ಸೊಸೈಟಿ ಸ್ಥಾಪನೆಯಾಗುವಲ್ಲಿ ಪ್ರಮುಖರಾಗಿದ್ದ ಅವರಿಗೆ ಸಮಾಜದ ಋಣ ತೀರಿಸಬೇಕಾದರೆ ಸಿರಸಂಗಿಯಲ್ಲಿ ಕೆಎಲ್‌ಇ ಸಂಸ್ಥೆಯವರು ಲಿಂಗರಾಜ ಮ್ಯೂಸಿಯಂ ಸ್ಥಾಪನೆ ಮಾಡಬೇಕು. ಕಾರಣ ಅವರು ಪ್ರಥಮ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮಕ್ಕಳಿಗೆ ಅವರ ತ್ಯಾಗ ಗುಣ ತಿಳಿಸಿಕೊಡಲು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು ಎಂದರು.
ಮಹಾದಾನಿ ಸಿರಸಂಗಿ ಲಿಂಗರಾಜರ ಜೀವನ ಮತ್ತು ಕೊಡುಗೆ ಕುರಿತು ಜೆ.ಎ.ಪ.ಪೂ.ಕಾಲೇಜು ಉಪನ್ಯಾಸಕಿ ಆರ್.ಆರ್.ಇನಾಮದಾರ ಉಪನ್ಯಾಸ ನೀಡಿ, ತ್ಯಾಗವೀರ ಶಿರಸಂಗಿ ಲಿಂಗರಾಜ ಅವರ ಸಮಗ್ರ ಜೀವನ ಪರಿಚಯಿಸಿದರು.ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ.ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ತ್ಯಾಗವೀರ ಸಿರಸಂಗಿ ಲಿಂಗರಾಜರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ನಿಸ್ವಾರ್ಥ ಕೊಡುಗೆ ಬಗ್ಗೆ ವಿವರಿಸಿದರು.
ಸೇವಾ ಸಂಸ್ಥೆ ಅಧ್ಯಕ್ಷ ಬಿ.ಸಿ.ನಾಡಗೌಡ್ರ, ಕಸಾಪ ಕಾರ್ಯಕಾರಿಣಿ ಸದಸ್ಯ ಕೃಷ್ಣಮೂರ್ತಿ ಸಾಹುಕಾರ, ಸಿ.ಕೆ. ಗಣಪ್ಪನವರ, ರಮೇಶ ಪಾಟೀಲ, ಡಾ. ಎಸ್.ಬಿ.ಹಿರೇಮಠ ಇತರರು ಉಪಸ್ಥಿತರಿದ್ದರು. ಪ್ರಾ. ಪಿ.ಎಂ.ಕಲ್ಲನಗೌಡ್ರ ಸ್ವಾಗತಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎ. ಬೆಲೇರಿ ನಿರೂಪಿಸಿ, ಎಂ.ಐ. ಮುಲ್ಲಾ ವಂದಿಸಿದರು.