ಶ್ರೀ ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯ 2024 - 26 ಕೊನೆಯ ಹಂತದಲ್ಲಿದ್ದು, ಗುರುವಾರ ಪರ್ಯಾಯ ಮಂಗಳೋತ್ಸವ ಹಾಗೂ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ತುಲಾಭಾರ ಸಹಿತ ಭವ್ಯ ಗುರುವಂದನಾ ಸಮಾರಂಭ

ಉಡುಪಿ: ಶ್ರೀ ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯ 2024 - 26 ಕೊನೆಯ ಹಂತದಲ್ಲಿದ್ದು, ಗುರುವಾರ ಪರ್ಯಾಯ ಮಂಗಳೋತ್ಸವ ಹಾಗೂ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ತುಲಾಭಾರ ಸಹಿತ ಭವ್ಯ ಗುರುವಂದನಾ ಸಮಾರಂಭ ರಾಜಾಂಗಣದಲ್ಲಿ ನಡೆಯಲಿದೆ.ಸಂಜೆ 4ರಿಂದ ಶ್ರೀಗಳ ಶಿಷ್ಯರು ಮತ್ತು ಭಕ್ತಾಭಿಮಾನಿಗಳಿಂದ ಗುರುವಂದನೆ ನಡೆಯಲಿದೆ. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿನಂದನಾ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಮಾಹೆ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.ಯತಿಕುಲ ಚಕ್ರವರ್ತಿ ಬಿರುದು:

ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಸ್ವಾಗತ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಯತಿಕುಲ ಚಕ್ರವರ್ತಿ ಬಿರುದು ನೀಡಿ ಗೌರವಿಸಲಾಗುತ್ತದೆ. ಕಳೆದ 2 ವರ್ಷಗಳಲ್ಲಿ ಶ್ರೀಗಳು ನಡೆಸಿದ ವಿಶ್ವಗೀತಾ ಪರ್ಯಾಯೋತ್ಸವದಲ್ಲಿ ಮಾಡಿರುವ ಕೃಷ್ಣಮಠದ ಅಭಿವೃದ್ಧಿ, ಕೃಷ್ಣನಿಗೆ ಮುತ್ತಿನ ಕಿರೀಟ, ಸುವರ್ಣ ಪಾರ್ಥಸಾರಥಿ ರಥ, ಸುವರ್ಣ ತೀರ್ಥ ಮಂಟಪ, ಸುವರ್ಣ ಪಥ, ಸಂತ ಸಂದೇಶ, ಅಂತರಾಷ್ಟ್ರೀಯ ಗೀತಾ ಸಮ್ಮೇಳನ, ಕೋಟಿ ಗೀತಾ ಲೇಖನ, ಲಕ್ಷ ಕಂಠ ಪಾರಾಯಣ, ಪ್ರಧಾನಿ ಮೋದಿ ಅವರನ್ನು ಕರೆಸಿ, ನಭೂತೋ ರೀತಿಯಲ್ಲಿ ಪರ್ಯಾಯೋತ್ಸವವನ್ನು ನಡೆಸಿದ ಹಿನ್ನೆಲೆಯಲ್ಲಿ ಈ ಬಿರುದು ನೀಡಿ ಕೃತಜ್ಞತಾಪೂರ್ವಕ ಅಭಿನಂದಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.