ಉಡುಪಿ: ಇಲ್ಲಿನ ಶ್ರೀ ಪುತ್ತಿಗೆ ಮಠಾಧೀಶ, ಯತಿಕುಲ ಚಕ್ರವರ್ತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತವರ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಉಡುಪಿ ಗೀತಾಮಂದಿರದಲ್ಲಿ ಸಮಸ್ತ ಹಿಂದೂ ಬಾಂಧವರಿಗಾಗಿ ಶ್ರೀಪುತ್ತಿಗೆ ಸುಗುಣ ಶಿಬಿರವನ್ನು ಮೊಟ್ಟಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.

ಭಾನುವಾರ ಅಪರಾಹ್ನ 3 ಗಂಟೆಗೆ ಶಿಬಿರವನ್ನು ಪರ್ಯಾಯ ಶ್ರೀಶೀರೂರು ಶ್ರೀಕೃಷ್ಣ ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟನೆಗೈಯಲ್ಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ರಾಷ್ಟ್ರಪ್ರಶಸ್ತಿ ವಿಜೇತ ನಟ-ನಿರ್ದೇಶಕ ರಿಷಭ್ ಶೆಟ್ಟಿ, ಕಾಪು ಹೊಸ ಮಾರಿಗುಡಿ ಕ್ಷೇತ್ರದ ರಾಜರ್ಷಿ ವಾಸುದೇವ ಶೆಟ್ಟಿ ಮತ್ತು ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ಭಾಗವಹಿಸಲಿದ್ದಾರೆ. ಸಮಗ್ರ ಶಿಬಿರಕ್ಕೆ ಭಾರತೀಯ ಸಂತ ಮಹಾಪರಿಷತ್, ವಿಶ್ವಹಿಂದೂ ಪರಿಷತ್, ಸಂಸ್ಕಾರ ಭಾರತಿ, ಕುಟುಂಬ ಪ್ರಬೋಧನ ಸಮಿತಿ ಮತ್ತು ಪತಂಜಲಿ ಯೋಗ ಸಮಿತಿಗಳ ಉಡುಪಿ ಘಟಕಗಳು ಸಹಯೋಗ ನೀಡಲಿವೆ. ಏ. 20ರಿಂದ 30ರವರೆಗೆ ಪ್ರತಿದಿನ ಅಪರಾಹ್ನ 2 ರಿಂದ ಸಂಜೆ 5.30 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ 5 ವರ್ಷ ವಯೋಮಿತಿಯಿಂದ 60 ವರ್ಷ ಮೇಲ್ಪಟ್ಟವರೆಗೂ ಐದು ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಸರಳ ನಿತ್ಯ-ವಿಧಿಗಳು, ಹಿಂದೂ ಆಚಾರ-ವಿಚಾರಗಳು, ಹಾಡು, ಭಜನೆ, ಕಲೆ, ಹೂ ಕಟ್ಟುವುದು, ರಂಗವಲ್ಲಿ, ವಿವಿಧ ಆಟಗಳು, ಕರ-ಕುಶಲತೆ, ಹಬ್ಬ-ಹರಿದಿನಗಳ ಮಾಹಿತಿ, ಉಪನ್ಯಾಸಗಳು ಹಾಗೂ ಸಾಧಕ-ಸಂವಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಯಾವುದೇ ವಯೋಮಾನದ ಹಿಂದೂ ಬಾಂಧವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಏ. 30ರಂದು ಹಿರಿಯಡ್ಕದಲ್ಲಿರುವ ಶ್ರೀ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹೆಚ್ಚಿನ ಮಾಹಿತಿ ನೋಂದಣಿಗಾಗಿ 9880835626 ಅಥವಾ 8792158946 ಅಥವಾ 9663891702 ನ್ನು ಸಂಪರ್ಕಿಸಬಹುದಾಗಿದೆ ಎಂದು ಶಿಬಿರ ಸಮಿತಿ ತಿಳಿಸಿದೆ.