ಚಿಕ್ಕಮಗಳೂರುಶಿಕ್ಷಣ ಕ್ಷೇತ್ರದಲ್ಲಿ ಅನುದಾನ ರಹಿತ ಶಾಲೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಿ ಶಾಲೆಗಳ ಉಳವಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

- ಇಎಸ್‌ಐ, ಇಪಿಎಫ್‌ಓ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ, ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿಕ್ಷಣ ಕ್ಷೇತ್ರದಲ್ಲಿ ಅನುದಾನ ರಹಿತ ಶಾಲೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಿ ಶಾಲೆಗಳ ಉಳವಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.ನಗರದ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ಧ ಇಎಸ್‌ಐ, ಇಪಿಎಫ್‌ಓ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಅನುದಾನ ರಹಿತ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಕುರಿತ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ಶೇ.60 ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರೈಸುತ್ತಿರುವ ಅನುದಾನ ರಹಿತ ಶಾಲೆಗಳ ಸಮಸ್ಯೆಗಳಿಗೆ ಸದಾ ಬೆನ್ನುಲುಬಾಗಿ ನಿಲ್ಲುತ್ತೇನೆ. ಯಾವುದೇ ಅಧಿಕಾರಿಗಳ ಕಿರುಕುಳ ಅಥವಾ ಶಾಲೆಗಳ ಇನ್ನಿತರೆ ಸಮಸ್ಯೆಗಳನ್ನು ನ್ಯಾಯ ಬದ್ಧವಾಗಿ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.ವಿಧಾನಸಭೆಯಲ್ಲೂ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ರಹಿತ ಶಾಲೆಗಳ ಕೊರತೆಗಳನ್ನು ಬಗೆ ಹರಿಸುತ್ತೇನೆ. ಯಾವುದೇ ತರಾತುರಿ ಕೆಲಸಕ್ಕೆ ಶಾಲೆಗಳ ಆಡಳಿತ ಮಂಡಳಿ ಕೈಹಾಕದೇ ನಿಧಾನಗತಿಯಲ್ಲಿ ಸಾಗುವುದು ಒಳಿತು. ಜಿಲ್ಲೆಯಾದ್ಯಂತ ಅನೇಕ ಅನುದಾನ ರಹಿತ ಶಾಲೆಗಳ ಸಮಸ್ಯೆಗಳನ್ನು ಡಿಡಿಪಿಐ ಹಾಗೂ ಬಿಇಓ ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು ಎಂದು ಸೂಚಿಸಿದರು.ಖಾಸಗಿ ಶಾಲೆಗಳು ಪ್ರತಿ ವರ್ಷ ಎದುರಿಸುತ್ತಿರುವ ಮಾನ್ಯತೆ ನವೀಕರಣ ಪ್ರಕ್ರಿಯೆಯಲ್ಲಿನ ಸಂಕೀರ್ಣತೆಗಳ ಬಗ್ಗೆ ಅರಿವಿದೆ. ಈ ನವೀಕರಣ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಸರ್ಕಾರ ರಚಿಸಿರುವ ವಿಶೇಷ ಶಾಸನ ಸಭೆ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೇನೆ. ಶಾಲೆಗಳಿಗೆ ಎದುರಾಗಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಅನುದಾನ ರಹಿತ ಶಾಲೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಅನುದಾನ ರಹಿತ ಶಾಲೆಗಳು ಎದುರಿಸುತ್ತಿರುವ ತೆರಿಗೆ, ಆಡಳಿತಾತ್ಮಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಶಾಲೆಗಳಿಗೆ ಸರ್ಕಾರದಿಂದ ಸಿಗಬೇಕಾದ ರಿಯಾಯಿತಿಗಳ ಬಗ್ಗೆ ಒತ್ತಾಯಿಸಿದರು.

ಇಪಿಎಫ್‌ಒ ಅಧಿಕಾರಿ ಜಿ.ಭರತ್ ಹಾಗೂ ಇಎಸ್‌ಐಸಿ ಅಧಿಕಾರಿ ರೇಣುಕಾ ಭವಿಷ್ಯ ನಿಧಿ ಯೋಜನೆ ಹಾಗೂ ನೌಕರರ ರಾಜ್ಯ ವಿಮಾ ಯೋಜನೆಗಳಿಂದ ದೊರೆಯಬಹುದಾದ ಸೌಲಭ್ಯಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ಪೈ ವಹಿಸಿದ್ದರು.ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಅನುದಾನ ರಹಿತ ಶಾಲೆಗಳ ಅಹವಾಲು ಸ್ವೀಕರಿಸಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ನಂದಕುಮಾರ್, ಖಜಾಂಚಿ ಶರದ್, ಸಹ ಕಾರ್ಯದರ್ಶಿ ಶ್ರೀನಿವಾಸ್ ಉಪಸ್ಥಿತರಿದ್ದರು. 29 ಕೆಸಿಕೆಎಂ 1ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ಧ ಇಎಸ್‌ಐ, ಇಪಿಎಫ್‌ಒ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ವಿಧಾನಪರಿಷತ್ ಸದಸ್ಯ ಎಸ್‌.ಎಲ್‌.ಭೋಜೇಗೌಡ ಉದ್ಘಾಟಿಸಿದರು.