ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಯಾವುದೇ ರೈತರ ಭೂಮಿಗಳಲ್ಲಿ ಅರಣ್ಯ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಬಾರದು, ಅವರ ಬೆಳೆಗಳನ್ನು ನಾಶ ಮಾಡಬಾರದು ಒಕ್ಕಲೆಬ್ಬಿಸಬಾರದು ಎಂಬ ತೀರ್ಮಾನವನ್ನು ಅರಣ್ಯ ಇಲಾಖೆ ಉಲ್ಲಂಘಿಸಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ತಾಲೂಕಿನ ರೈತರು ತಮ್ಮ ಪೂರ್ವಜರ ಕಾಲದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದಿಂದ ವಶಕ್ಕೆ ತಗೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಪ್ರಾಂತ್ಯ ರೈತ ಸಂಘ, ಕಾರ್ಮಿಕ ಹಿತ ರಕ್ಷಣಾ ಸಮಿತಿ ಹಾಗು ಮಾವು ಬೆಳೆಗಾರರ ಸಂಘದ ವತಿಯಿಂದ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಸಂಬಂಧಪಟ್ಟ ದಾಖಲೆಗಳನ್ನು ನೀಡದೆ ಏಕಾ ಏಕಿ ರೈತರ ಸಾಗುವಳಿ ಜಮೀನುಗಳಿಗೆ ನುಗ್ಗುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉದ್ದಟತನದಿಂದ ವರ್ತಿಸುತ್ತಾರೆ. ಇದನ್ನು ಪ್ರತಿಭಟಿಸಿದ ರೈತರ ವಿರುದ್ಧ ಅರಣ್ಯ ಇಲಾಖೆ ಪೋಲಿಸರಿಗೆ ನೀಡಿರುವ ದೂರನ್ನು ವಾಪಸ್‌ ಪಡೆಯಬೇಕು ಎಂದು ಅಗ್ರಹಿಸಿದರು.ಕೆಡಿಪಿ ಸಭೆ ನಿರ್ಣಯದ ಉಲ್ಲಂಘನೆ

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಯಾವುದೇ ರೈತರ ಭೂಮಿಗಳಲ್ಲಿ ಅರಣ್ಯ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಬಾರದು, ಅವರ ಬೆಳೆಗಳನ್ನು ನಾಶ ಮಾಡಬಾರದು ಒಕ್ಕಲೆಬ್ಬಿಸಬಾರದು ಎಂಬ ತೀರ್ಮಾನವನ್ನು ಕೆಡಿಪಿ ಸಭೆಯಲ್ಲಿ ತೆಗೆದು ಕೊಂಡಿದ್ದರೂ ಅರಣ್ಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ಹೋರಟಿರುವುದು ಅಕ್ರಮ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಕಲ್ಲೂರು ಮಂಜು ಹೇಳಿದರು.

ಸರ್ಕಾರವು 2015ರಲ್ಲಿ 3 ಎಕರೆಗಿಂತ ಕಡಿಮೆ ಇರುವ ಯಾವುದೇ ರೈತರ ಜಮೀನುಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶವಿದ್ದರೂ ಸಹ ಯಾವುದನ್ನೂ ಪಾಲಿಸದೆ ಅಕ್ರಮವಾಗಿ ವರ್ತಿಸುತ್ತಿದ್ದೀರಿ ಈ ಬಗ್ಗೆ ಜಿಲ್ಲಾಡಳಿತ ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಎಂದರು.ರೈತರು ಬೀದಿಪಾಲಾಗುವ ಸ್ಥಿತಿ

ಜಮೀನುಗಳಲ್ಲಿ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬದಕು ಕಟ್ಟಿಕೊಂಡಿದ್ದ ರೈತ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ಏರ್ಪಟ್ಟಿದೆ. ತಾವು ಉತ್ತಿ, ಬಿತ್ತುತ್ತಿದ್ದ ಜಮೀನು ತಮ್ಮ ಕೈಬಿಡದು ಎಂಬ ನಂಬಿಕೆಯಲ್ಲಿದ್ದ ರೈತರು, ಅರಣ್ಯ ಇಲಾಖೆ ಕ್ರಮದಿಂದ ಕಂಗೆಟ್ಟಿದ್ದಾರೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಸೂರಿ ಆರೋಪಿಸುತ್ತಾರೆ.ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಜಮೀನಿಗೆ ಕಂದಾಯವನ್ನೂ ಕಟ್ಟುತ್ತಿದ್ದ ರೈತರನ್ನು ಧಿಕ್ಕರಿಸಿ ಅರಣ್ಯ ಇಲಾಖೆ, ಜಮೀನು ವಶಕ್ಕೆ ಪಡೆಯಲು ಮುಂದಾಗಿರುವುದು ದುರಂತ ಎಂದು ಮಾವು ಬೆಳೆಗಾರರ ಸಂಘದ ನಿಲಟೂರು ಚಿನ್ನಪ್ಪರೆಡ್ಡಿ ವಿಷಾದ ವ್ಯಕ್ತಪಡಿಸಿದರು.ಜನವಸತಿ ಪ್ರದೇಶಕ್ಕೂ ಬೇಲಿತಾಲೂಕಿನ ಕಸಬಾ ಹೋಬಳಿ ಶಿವಪುರ ಮೊಗಿಲಹಳ್ಳಿ ಗಂಗನಪಲ್ಲಿ ಸೇರಿದಂತೆ ಇನ್ನೂ ಕೆಲ ಗ್ರಾಮಗಳ ಜನ ವಸತಿ ಪ್ರದೇಶಗಳಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು ಗಡಿ ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಎಸ್.ಐ.ಟಿ ರಚನೆ ಮಾಡಿ ಜಂಟಿ ಸರ್ವೆ ಆಗುವ ವರಿಗೂ ಅರಣ್ಯ ಇಲಾಖೆಯವರು ಯಾವುದೇ ರಿತಿಯಲ್ಲೂ ರೈತರ ಜಮೀನಿಗೆ ಪ್ರವೇಶ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಲದ ಸೂಚನೆ ಹಾಗು ಜಿಲ್ಲಾಧಿಕಾರಿಗಳ ಆದೇಶ ಇದ್ದರು ಅರಣ್ಯ ಇಲಾಖೆಯವರು ಸ್ಪಂದಿಸುತ್ತಿಲ್ಲ ಇದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ ಎಂದು ಎಂದು ಕಾರ್ಮಿಕ ಮುಖಂಡ ಪಾತಕೋಟೆ ನವೀನ್ ಕುಮಾರ್ ಮತ್ತು ರೈತ ಮುಖಂಡ ಕಾಶಿಂಗಡ್ಡ ಫಾರೂಖ್ ಹೇಳಿದರು.ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯೆ ರತ್ನಮ್ಮಗಣೇಶ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನಾಗರಾಜ್, ವಾಸು, ಹೂವಳ್ಳಿಕೃಷ್ಣಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ಬಂಕ್ ಮಂಜು, ರಾಮಾಂಜಮ್ಮ, ಚಲ್ದಿಗಾನಹಳ್ಳಿಈರಪ್ಪ, ಶಿವಪುರ ಶಿವಣ್ಣ ಸೇರಿದಂತೆ ಶಿವಪುರ ಮೊಗಿಲಹಳ್ಳಿ ಇನ್ನೂ ಕೆಲ ಗ್ರಾಮಸ್ಥರು ತಮ್ಮ ಗ್ರಾಮಗಳಿಂದ ಹೊರಟು ಮೆರವಣಿಗೆ ಮೂಲಕ ಎಂ.ಜಿ. ರಸ್ತೆಯಲ್ಲಿ ಸಾಗಿಬಂದು ಧರಣಿಯಲ್ಲಿ ಪಾಲ್ಗೋಂಡಿದ್ದರು.