ಕಸಾಪದಿಂದ ಮರೆಯಲಾಗದ ಮಹನೀಯರು ಕಾರ್ಯಕ್ರಮ

| Published : Mar 27 2024, 01:02 AM IST

ಸಾರಾಂಶ

ನಗರದ ಯೋಗೀಶ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕಸಾಪ ಮಹಿಳಾ ಘಟಕದಿಂದ ಆಯೋಜಿಸಲಾದ ಮರೆಯಲಾಗದ ಮಹನೀಯರು ಕಾರ್ಯಕ್ರಮವನ್ನು ಆಯೋಜಿಸಿ ಮಹನೀಯರನ್ನು ಸ್ಮರಿಸಲಾಯಿತು.

ಬೀದರ್: ಪ್ರಸಕ್ತ ವರ್ಷದಿಂದಲೇ ಸೈನಿಕ ಶಾಲೆ ಪ್ರವೇಶವನ್ನು ಆರಂಭಿಸಲಾಗುವುದೆಂದು ಹೈದ್ರಾಬಾದ್ ಕರ್ನಾಟಕ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿಯವರು ಹೇಳಿದರು.

ನಗರದ ಯೋಗೀಶ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕಸಾಪ ಮಹಿಳಾ ಘಟಕದಿಂದ ಆಯೋಜಿಸಲಾದ ಮರೆಯಲಾಗದ ಮಹನೀಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅವಿರತ ಸೇವೆ ಫಲವಾಗಿ ತಮಗೆ ಮತ್ತೊಮ್ಮೆ ಎಚ್‌ಕೆಇ ಸಂಸ್ಥೆ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ದಿ.ಚೆನ್ನವೀರಯ್ಯ ಸ್ವಾಮಿ ಮಠದ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯ ಎಂದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಡಾ.ಸಂಜೀವ ಕುಮಾರ್‌ ಅತಿವಾಳೆ ಮಾತನಾಡಿ, ದಿ.ಚನ್ನವೀರಯ್ಯ ಮಠದ ಅನೇಕರ ಬಾಳಿಗೆ ನೆಲೆ ಒದಗಿಸಿಕೊಟ್ಟಿದ್ದಾರೆ.

ವ್ಯಕ್ತಿ ಇಲ್ಲದ ಸಮಯದಲ್ಲಿ ಅವರ ಸೇವೆ ಸ್ಮರಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ದ್ವೇಷವನ್ನು ಅಳಿಸಿ ಪ್ರೀತಿ ಉಳಿಸಬೇಕು. ಆ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಗಡಿನಾಡಿನ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಡಾ.ಪ್ರೇಮಲತಾ ಪಾಟೀಲ್‌ ಮಾತನಾಡಿ, 90ರ ದಶಕದಿಂದ ಯೋಗೀಶ್ ಮಹಾವಿದ್ಯಾಲಯ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ದಿ.ಚನ್ನವೀರಯ್ಯ ಮಠದ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು. ಈ ಸಂಸ್ಥೆ ಕಟ್ಟುವಲ್ಲಿ ಶಾಂತಾ ಮಠದ ಅವರ ಪರಿಶ್ರಮವೂ ಸಾಕಷ್ಟಿದೆ. ಇಂತಹ ಮಹನೀಯರನ್ನು ಸ್ಮರಿಸುವ ಪುಣ್ಯಕಾರ್ಯ ಕಸಾಪ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಾಂತಾ ಚ.ಮಠದ ಮಾತನಾಡಿ, ತನ್ನ ಮೈಮೇಲಿನ ಒಡವೆಗಳನ್ನು ಮಾರಿ ಚನ್ನವೀರಯ್ಯ ಮಠದ ಅವರು ಸಂಸ್ಥೆ ಕಟ್ಟಿದ್ದಾರೆ. ದಿ.ಗುಂಡುರಾವ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ನಮಗೆ ಈ ಸಂಸ್ಥೆಯನ್ನು ಪ್ರಾರಂಭಿಸಿಲು ಅನುಮತಿ ನೀಡಿದರೆಂದು ಸ್ಮರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ಮಾತನಾಡಿ, ಅನೇಕ ಸಮ್ಮೇಳನಗಳನ್ನು ಮಾಡುವುದರ ಮಧ್ಯದಲ್ಲಿಯೂ ಇಂತಹ ಮಹನೀಯರನ್ನು ಸ್ಮರಿಸುವ ಮೂಲಕ ಕಸಾಪ ಮಹತ್ವದ ಹೆಜ್ಜೆಯನ್ನಿಕ್ಕುತ್ತಿದೆ ಎಂದರು.

ದಿ.ಚನ್ನವೀರಯ್ಯ ಸ್ವಾಮಿ ಮಠದ ಅವರನ್ನು ಕುರಿತು ಶಂಭುಲಿಂಗ ವಾಲದೊಡ್ಡಿ, ವಿಜಯಕುಮಾರ ಗೌರೆ, ಪ್ರಕಾಶ ತಾಂದಳೆ, ಶ್ರೀಕಾಂತ ಬಿರಾದಾರ ಮತ್ತು ಶಿವರಾಜ ಮಿತ್ರ ಮಾತನಾಡಿದರು.

ಕಸಾಪ ಕಾರ್ಯದರ್ಶಿ ಟಿ.ಎಂ.ಮಚ್ಛೆ ಸ್ವಾಗತಿಸಿದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ನಿರೂಪಿಸಿದರೆ ದಿವ್ಯಾ ಮಠದ ವಂದಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಯು.ಕೆ.ಪ್ರತಿನಿಧಿ ಆದೀಶ್ ವಾಲಿ, ಎಂ.ಡಿ.ಶರೀಫ್, ಭಾರತಿ ವಸ್ತ್ರದ, ಯೋಗೀಶ್ ಮಠದ, ಬಾಬುರಾವ ದಾನಿ, ಗುರುನಾಥ ರಾಜಗೀರಾ, ಶಿವಕುಮಾರ ಚನ್ನಶಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.