ಇಲ್ಲಿವೆ ಕಂಡು ಕೇಳರಿಯದ ಗಡ್ಡೆ ಗೆಣಸುಗಳು!

| Published : Jan 08 2025, 12:15 AM IST

ಸಾರಾಂಶ

ಈ ಬಾರಿ ಗಡ್ಡೆ ಗೆಣಸು ಮೇಳದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ.

ವಸಂತಕುಮಾರ್ ಕತಗಾಲ

ಕಾರವಾರ: ಬುಧವಾರ ಜೋಯಿಡಾಕ್ಕೆ ಬನ್ನಿ. ಕುಣಬಿ ಭವನ ಹಾಗೂ ಆವರಣದ ತುಂಬೆಲ್ಲ ಕಂಡು ಕೇಳರಿಯದ ಗಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಇಂದು ನಡೆಯುವ ಗಡ್ಡೆ ಗೆಣಸು ಮೇಳದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನೆಲಮೂಲ ಸಂಸ್ಕೃತಿಯ ಇಲ್ಲಿನ ಕುಣಬಿ ಸಮಾಜದವರು ಶತಮಾನಗಳಿಂದ ಅಪರೂಪದ ಗಡ್ಡೆ ಗೆಣಸುಗಳನ್ನು ಬೆಳೆಯುತ್ತಿದ್ದಾರೆ. ಜೋಯಿಡಾದ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಗಡ್ಡೆ ಗೆಣಸುಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳಿಗೆ ಮಾರುಕಟ್ಟೆಯೇ ಇರಲಿಲ್ಲ. ರಸ್ತೆ ಪಕ್ಕದಲ್ಲಿ ದಿನವಿಡಿ ಕುಳಿತು ಪ್ರಯಾಣಿಕರಿಗೆ ಮಾರಾಟ ಮಾಡುತ್ತಿದ್ದರು. ಗಡ್ಡೆ ಗೆಣಸು ಮೇಳದಿಂದ ಬೆಳೆಗಾರರಿಗೆ ವ್ಯವಸ್ಥಿತವಾದ ಮಾರುಕಟ್ಟೆ ಒದಗಿಸಿದಂತಾಗಿದೆ. ಇಲ್ಲಿ 10 ವರ್ಷಗಳಿಂದ ನಿರಂತರವಾಗಿ ಗಡ್ಡೆ ಗೆಣಸು ಮೇಳ ನಡೆದಿದೆ. ಜೋಯಿಡಾದ ಕುಣಬಿ ಸಮುದಾಯದವರು ಮರಾಠಿ ಮಿಶ್ರಿತ ಕೊಂಕಣಿ ಭಾಷೆಯಲ್ಲಿ ಗಡ್ಡೆಗೆ ಕೋನ್ ಎನ್ನುತ್ತಾರೆ. ಕೆಸುವಿಗೆ ಮುಡ್ಲಿ ಎನ್ನುತ್ತಾರೆ. ಈ ಮೇಳದಲ್ಲಿ ಅಳೆಕೋನ್, ಧಯೆಕೋನ್, ಹಾತಿ ಕೋನ್, ನಾಗರಕೋನ್, ದುಕರ್ ಕೋನ್, ಪುಲಾ ಮುಡ್ಲಿ, ಕುಣಬಿ ಮುಡ್ಲಿ, ದಾವಾ ಮುಡ್ಲಿ ಹೀಗೆ ನಾನಾ ಬಗೆ ಬಗೆಯ ಗಡ್ಡೆ ಗೆಣಸುಗಳನ್ನು ಇಲ್ಲಿ ನೋಡಬಹುದು. ಖರೀದಿಸಿ ತಂದು ಅಡುಗೆ ಮಾಡಬಹುದು.

ಜಯಾನಂದ ಡೇರೇಕರ ಮೇಳದ ರೂವಾರಿ

ಈ ಬಾರಿ ಗಡ್ಡೆ ಗೆಣಸು ಮೇಳದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ. ಜೋಯಿಡಾದ ಜಯಾನಂದ ಡೇರೇಕರ ಈ ಗಡ್ಡೆ ಗೆಣಸು ಮೇಳದ ರೂವಾರಿಯಾಗಿದ್ದು, ತಮ್ಮದೆ ಆದ ತಂಡದೊಂಡಿದೆ ವ್ಯವಸ್ಥಿತವಾಗಿ ಗಡ್ಡೆ ಗೆಣಸು ಮೇಳವನ್ನು ಸಂಘಟಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ತನಕ ಮೇಳ ನಡೆಯಲಿದೆ. ಸ್ವಾದಿಷ್ಟಕರ ತಿಂಡಿ, ಊಟ

ಮೇಳದಲ್ಲಿ ಗಡ್ಡೆ ಗೆಣಸುಗಳಿಂದ ತಯಾರಿಸಿದ ಸ್ವಾದಿಷ್ಟಕರ ತಿಂಡಿ, ಊಟ ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಗಡ್ಡೆ ಗೆಣಸುಗಳಿಂದ ತಯಾರಿಸಿದ ಚಿಪ್ಸ್, ಬಜ್ಜಿ, ಚಟ್ನಿ, ಉಪ್ಪಿನಕಾಯಿ, ದೋಸೆ, ಮುಡ್ಲಿ ಬಜ್ಜಿ, ಹಪ್ಪಳ, ರೋಟಿ, ಸಾಂಬಾರ್, ಭಾಜಿ, ಚಿರಕೆ ಚಿಲ್ಲಿ ಹೀಗೆ ಸ್ಥಳದಲ್ಲೇ ತಿಂಡಿ, ಊಟ ಸವಿಯಬಹುದು.

ದೊಡ್ಡ ಮಾರುಕಟ್ಟೆ: ಗಡ್ಡೆ ಗೆಣಸು ಮೇಳ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಇಲ್ಲಿನ ಗಡ್ಡೆ ಗೆಣಸುಗಳಿಗೆ ಈ ಮೇಳ ದೊಡ್ಡ ಮಾರುಕಟ್ಟೆಯಾಗಿದೆ. ಈ ಬಾರಿ 200ಕ್ಕೂ ಹೆಚ್ಚು ಮಾರಾಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೇಳದ ಸಂಘಟಕರಾದ ಜಯಾನಂದ ಡೇರೇಕರ ತಿಳಿಸಿದರು.