ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯಲ್ಲಿ ಕಳೆದ ಎರಡು- ಮೂರು ದಿನಗಳಿಂದ ಹವಾಮಾನ ವೈಪರೀತ್ಯದಿಂದ ಅಲ್ಲಲ್ಲಿ ಬೀಳುತ್ತಿರುವ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣ ರಾಗಿ ಬೆಳೆ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 67,342 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯ 5 ತಾಲೂಕುಗಳಲ್ಲಿಯೂ ರಾಗಿ ಪ್ರಮುಖ ಬೆಳೆಯಾಗಿದ್ದು, ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕೆಲವೆಡೆ ರಾಗಿ ಪೈರು ನೆಲ ಕಚ್ಚುತ್ತಿದೆ. ರಾಗಿ ಕುಯ್ಲಿಗೂ ಅಡ್ಡಿಯಾಗುತ್ತಿದ್ದು, ರೈತರು ಫಸಲು ಕೈತಪ್ಪುವ ಭೀತಿಯಲ್ಲಿದ್ದಾರೆ.ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿಯೂ ಮುಂಗಾರು ಕೈ ಹಿಡಿದ ಹಿನ್ನೆಲೆಯಲ್ಲಿ 67,342 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ನಡೆದಿದ್ದು, ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಜೀವನ ನಿರ್ವಹಣೆಗೆ ಸಾಕಾಗಲಿದೆ ಎಂಬ ಆಸೆ ಇಟ್ಟುಕೊಂಡಿದ್ದ ರೈತರಿಗೆ ಹವಾಮಾನ ವೈಪರೀತ್ಯ ನಿರಾಸೆ ಮೂಡಿಸಿದೆ. ಕಟಾವು ಮಾಡಿರುವ ಹಾಗೂ ಕಟಾವು ಹಂತ ತಲುಪಿರುವ ರಾಗಿ ಬೆಳೆಗೆ ಹಾನಿಯಾಗಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣದಿಂದ ಕಟಾವಿಗೆ ಅಡಚಣೆ ಉಂಟಾಗುತ್ತಿದೆ. ಮಳೆಯ ನಿರೀಕ್ಷೆ ಇಲ್ಲದಿದ್ದ ರೈತರು ರಾಗಿ ಕಟಾವು ಮಾಡಿ, ಪೈರನ್ನು ಹೊಲದಲ್ಲೇ ಹರಡಿದ್ದರು. ಕೆಲವೆಡೆ ತುಂತುರು ಮಳೆಗೆ ಸಿಲುಕಿದ ಪೈರು ತೊಯ್ದು ತೆನೆಗಳು ನೆಲ ಕಚ್ಚಿ ಹಾಳಾಗುತ್ತಿವೆ.ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕಟಾವು ಮಾಡಲು ರೈತರು ಹಿಂದೆ ಮುಂದೆ ನೋಡುತ್ತಿದ್ದಾರೆ. ತುಂತುರು ಮಳೆಯಿಂದ ತೊಯ್ದ ರಾಗಿ ತೆನೆ, ಒಣಗಲು ಅವಕಾಶವಿಲ್ಲದೆ ಗೆದ್ದಲು ಹುಳುಗಳಿಗೆ ತುತ್ತಾಗುತ್ತದೆ ಎಂಬ ಆತಂಕ ರೈತರದು. ಕಟಾವು ಹಂತ ತಲುಪಿದ್ದ ಬೆಳೆ ಮಳೆಯಿಂದ ನೆಲ ಕಚ್ಚಿದೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಶೇಕಡಾ 12ರಷ್ಟು ಬೆಳೆಯನ್ನು ರೈತರು ಕಟಾವು ಮಾಡಿ ಸಂರಕ್ಷಣೆ ಮಾಡಿದ್ದಾರೆ. ಇನ್ನು ಉಳಿದ ಶೇಕಡ 88ರಷ್ಟು ಬೆಳೆ ಕಟಾವಿಗೆ ಸಿದ್ಧವಾಗಿದ್ದು, 15 ದಿನಗಳ ಕಾಲ ಮೋಡವಾಗಲಿ ಮಳೆಯಾಗಲಿ ಆಗದಿದ್ದರೆ ಶೇಕಡ 100 ರಷ್ಟು ಬೆಳೆ ರೈತರ ಕೈ ಸೇರಲಿದೆ.ರಾಗಿ ಬೆಳೆಯನ್ನು ಕಟಾವು ಮಾಡಿದ ಮೇಲೆ ಮೋಡ ಬಂದರೆ ಅಥವಾ ತುಂತುರು ಮಳೆಯಾದರೂ ರಾಗಿ ಫಸಲು ನಾಶವಾಗುತ್ತದೆ. ದೇವರ ದಯೆಯಿಂದ 15 ದಿನಗಳ ಕಾಲ ಒಳ್ಳೆ ಬಿಸಿಲು ಬಂದು ಮಳೆ ಬಾರದಿದ್ದರೆ ನಾವು ಕಷ್ಟ ಪಟ್ಟಿದ್ದು ಸಾರ್ಥಕವಾಗುತ್ತದೆ. ಎರಡು ವರ್ಷದ ಫಸಲನ್ನು ಈ ಒಂದು ವರ್ಷದಲ್ಲೇ ಬೆಳೆದುಕೊಂಡಿದ್ದೇವೆ ಎನ್ನುತ್ತಾರೆ ರೈತ ರಮೇಶ.
ಕಟಾವು ಮಾಡಿದ ಸಂದರ್ಭದಲ್ಲಿ ಮಳೆಯಾದರೆ ರಾಗಿ ಮೊಳಕೆಯೊಡೆದು ಹಾಳಾಗುತ್ತದೆ. ಆ ಕಾರಣದಿಂದಾಗಿ 15 ದಿನಗಳ ನಂತರ ರಾಗಿ ಕಟಾವು ಮಾಡಿ ಸಂರಕ್ಷರಣೆ ಮಾಡಲು ರೈತರೇ ತೀರ್ಮಾನಿಸಿದರೆ ಸೂಕ್ತ ಎಂದು ಕೃಷಿ ಇಲಾಖೆ ಅಧಿಕಾರಿಗಳು `ಕನ್ನಡಪ್ರಭ`ಕ್ಕೆ ಪ್ರತಿಕ್ರಿಯೆ ನೀಡಿದರು.---------------------------
ಮುಂಗಾರು ಹಂಗಾಮಿನ ಬೆಳೆವಾರು ಬಿತ್ತನೆ ವಿವರರಾಮನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 68,000 ಹೆಕ್ಟೇರ್ ಪೈಕಿ 67,342 ಹೆಕ್ಟೇರ್ ನಲ್ಲಿ ರಾಗಿ, 3780 ಹೆಕ್ಟೇರ್ ಪೈಕಿ 3652 ಹೆಕ್ಟೇರ್ ನಲ್ಲಿ ಭತ್ತ , 2000 ಹೆಕ್ಟೇರ್ ಪೈಕಿ 1544 ಹೆಕ್ಟೇರ್ ಮುಸುಕಿನ ಜೋಳ ಸೇರಿ
74,166 ಹೆಕ್ಟೇರ್ ಪೈಕಿ 72,606 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆ ಮಾಡಲಾಗಿತ್ತು.1000 ಹೆಕ್ಟೇರ್ ಪೈಕಿ 1130 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 300 ಹೆಕ್ಟೇರ್ ಗುರಿ ಪೈಕಿ 429 ಹೆಕ್ಟೇರ್ ನಲ್ಲಿ ಅಲಸಂಧೆ, 1000 ಹೆಕ್ಟೇರ್ ಗುರಿ ಪೈಕಿ 1106 ಹೆಕ್ಟೇರ್ ನಲ್ಲಿ ಅವರೆ ಸೇರಿ 5800 ಹೆಕ್ಟೇರ್ ಪೈಕಿ 4374ಹೆಕ್ಟೇರ್ ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕಾರ್ಯ ನಡೆದಿದೆ.
-----------------------------‘ಜಿಲ್ಲೆಯಲ್ಲಿ ರಾಗಿ ಬೆಳೆ ಕಟಾವು ಪ್ರಕ್ರಿಯೆ ಆರಂಭಗೊಂಡಿದ್ದು, ಶೇಕಡ 15 ರಷ್ಟು ಭಾಗ ರಾಗಿ ಕಟಾವು ಆಗಿದೆ. ಇಲ್ಲಿವರೆಗೆ ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ. ಮಳೆ ಮುಂದುವರಿದರೆ ಬೆಳೆ ನಷ್ಟವಾಗುವ ಸಾಧ್ಯತೆಗಳಿದ್ದು, ಆನಂತರ ಸರ್ಕಾರದ ಸೂಚನೆ ಪ್ರಕಾರ ಮುಂದುವರಿಯುತ್ತೇವೆ.’
-ಅಂಬಿಕಾ , ಜಂಟಿ ಕೃಷಿ ನಿರ್ದೇಶಕರು, ಬೆಂ.ದ.ಜಿಲ್ಲೆ.---
‘ಅನಿಶ್ಚಿತ ಮಳೆಯ ನಡುವೆಯೂ ಉತ್ತಮ ಫಸಲಿನೊಂದಿಗೆ ಕಟಾವಿಗೆ ಬಂದಿದ್ದ ರಾಗಿ ಬೆಳೆ,ನೆಲ ಕಚ್ಚುತ್ತಿದೆ. ಜೀವ ನೋಪಾಯಕ್ಕಾಗಿ ಬೆಳೆದಿದ್ದ ಬೆಳೆ ಹಾಳಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೊಲಗಳಲ್ಲಿದ್ದ ರಾಗಿ ಬೆಳೆ, ಕೊಳೆಯುವ ಹಂತ ತಲುಪಿದೆ. ಮೂರು ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರಿದಲ್ಲಿ, ರಾಗಿ ಬೆಳೆ ಸಂಪೂರ್ಣ ಕೈ ತಪ್ಪಲಿದೆ. ಕಳೆದ ಕೆಲವು ತಿಂಗಳು ಮಳೆ ಬರಲಿಲ್ಲ ಎಂದು ಮುಗಿಲು ನೋಡಿ ಕಾಲ ದೂಡುತ್ತಿದ್ದ ರೈತರು ಈಗ ಮಳೆ ಯಾಕೆ ಸುರಿಯುತ್ತಿದೆ ಎನ್ನುವಂತಾಗಿದೆ.’- ಕೃಷ್ಣಪ್ಪ, ರೈತ.
;Resize=(128,128))
;Resize=(128,128))
;Resize=(128,128))
;Resize=(128,128))