ದೊಡ್ಡಬಳ್ಳಾಪುರ: ಜನಸಾಮಾನ್ಯರ ಅಂತರಾಳದ ನೋವು, ಅನುಭವಗಳು ಕಥನಗಳಾಗಿ ಹೊರಬಂದಾಗ ಸಾಮಾಜಿಕ ಸೂಕ್ಷ್ಮತೆಯ ಅನಾವರಣವಾಗುತ್ತದೆ ಎಂದು ವಿರ್ಮಶಕ ಸುಭಾಷ್ ರಾಜಮನೆ ಅಭಿಪ್ರಾಯಪಟ್ಟರು

ದೊಡ್ಡಬಳ್ಳಾಪುರ: ಜನಸಾಮಾನ್ಯರ ಅಂತರಾಳದ ನೋವು, ಅನುಭವಗಳು ಕಥನಗಳಾಗಿ ಹೊರಬಂದಾಗ ಸಾಮಾಜಿಕ ಸೂಕ್ಷ್ಮತೆಯ ಅನಾವರಣವಾಗುತ್ತದೆ ಎಂದು ವಿರ್ಮಶಕ ಸುಭಾಷ್ ರಾಜಮನೆ ಅಭಿಪ್ರಾಯಪಟ್ಟರು.

ಇಲ್ಲಿನ ಡಾ.ಡಿ.ಆರ್.ನಾಗರಾಜ್‌ ಬಳಗದ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಿದ್ದ "ಟೀ ವಿತ್ ಕಥೆಗಾರ ಸಂವಾದ " ಕಾರ್ಯಕ್ರಮದಲ್ಲಿ ಯುವ ಕಥೆಗಾರ ವಿನಯ ಗುಂಟೆ ಅವರ ಬನದ ಕರಡಿ ಕಥಾ ಸಂಕಲನದ ಕುರಿತು ಮಾತನಾಡಿ, ಬವಣೆಗಳ ಚಕ್ರವ್ಯೂಹದಲ್ಲಿ ಕಂಗಾಲಾಗಿ ನಿಂತ ಅಸಹಾಯಕರು ಕಥೆಗಳ ನಾಯಕ-ನಾಯಕಿಯಾದಾಗ ಆ ಪಾತ್ರಗಳು ಪ್ರತಿಧ್ವನಿಸುವ ಪ್ರತಿ ಶಬ್ದವೂ ಸಂವೇದನೆಯಿಂದ ಕೂಡಿರುತ್ತದೆ. ಕಥೆ ಹಾಗೂ ಕಥನ ಪ್ರೀತಿಯ ವಿದ್ಯಾರ್ಥಿಯೊಬ್ಬ ಕಂಡುಕೊಳ್ಳಬೇಕಾದ ತನ್ನದೇ ದಾರಿಗಾಗಿ ನಡೆಸುವ ಹುಡುಕಾಟದ ಪ್ರಾಮಾಣಿಕ ಪ್ರಯತ್ನದಂತೆ ಈ ಕಥಾ ಸಂಕಲನ ಕಾಣಸಿಗುತ್ತದೆ. ಇಲ್ಲಿನ ಕಥೆಗಳ ಕಸುವಿಗೆ ಅವುಗಳು ಮೈದಳೆದಿರುವ ಭಾಷೆಯೂ ಕಾರಣವಾಗಿದೆ. ತನ್ನ ಊರು-ಕೇರಿಯ ಪರಿಸರವನ್ನು ಭಾಷೆಯ ಮೂಲಕ ಕಾಣಿಸುವ ಪ್ರಯತ್ನ ಇಲ್ಲಿದೆ ಎಂದು ವಿಶ್ಲೇಷಿಸಿದರು.

ತಲ್ಲಣಗಳ ಸೂಕ್ಷ್ಮ ಅಭಿವ್ಯಕ್ತಿ:

ಪ್ರಾಧ್ಯಾಪಕ ಡಾ.ಪ್ರಕಾಶ್‌ ಮಂಟೇದ ಮಾತನಾಡಿ, 90ರ ದಶಕದ ನಂತರದಲ್ಲಿ ದೊಡ್ಡಬಳ್ಳಾಪುರದಲ್ಲಿ ಆದ ಸ್ಥಿತ್ಯಂತರಗಳನ್ನು ಹಾಗೂ ಮನುಷ್ಯ ಲೋಕ ಅನುಭವಿಸಿದ ತಲ್ಲಣಗಳನ್ನು ಸೂಕ್ಷ್ಮವಾಗಿ ಹೇಳುವ ಕಥೆಗಾರ ಜಾತಿ, ವರ್ಗ, ಅಭಿವೃದ್ದಿ, ಕೋಮುದ್ವೇಷ ಮತ್ತು ನಗರೀಕರಣಗಳು ಉಂಟುಮಾಡಿದ ಪರಿಣಾಮಗಳನ್ನು ಸಶಕ್ತವಾದ ಕಥಾನಕಗಳಾಗಿ ಇಲ್ಲಿ ಕಾಣಬಹುದು ಎಂದರು.

ಜಾಗೃತಿಯ ಆಶಯ:

ಚಳವಳಿಗಾರ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ತುಳಿತಕ್ಕೊಳಗಾದ ಮತ್ತು ಸಾಮಾಜಿಕ ವಂಚನೆಯಲ್ಲೇ ನರಳುತ್ತಿರುವ ತಳವರ್ಗಗಳ ದನಿಯನ್ನು ಕಥಾನಕಗಳು ಕಟ್ಟಿಕೊಡಬೇಕು. ಇದು ಜಾಗೃತಿಯ ಆಶಯವನ್ನೂ ಹೊಂದಿರುತ್ತದೆ ಎಂದು ತಿಳಿಸಿದರು.

ಸಾತ್ವಿಕ ಬಂಡಾಯದ ಹೊಸ ಪ್ರಯತ್ನ:

ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ದಲಿತ ಸಾಹಿತ್ಯದ ಆಕ್ರೋಶದ ದನಿಯನ್ನು ಮೀರಿ ಇಲ್ಲಿನ ಕಥೆಗಳು ಸಾತ್ವಿಕ ದನಿಯಲ್ಲಿ ಬಂಡಾಯವನ್ನು ದಾಖಲಿಸುವ ಹೊಸ ಪ್ರಯತ್ನಗಳಾಗಿ ಕಾಣುತ್ತವೆ ಎಂಬ ವಿಮರ್ಶಕರ ನುಡಿಗಳು, ಸಮಕಾಲೀನ ಹೊಸ ಸಾಧ್ಯತೆಗಳ ಚರ್ಚೆಗೆ ಹೆಚ್ಚು ಪುಷ್ಠಿ ಒದಗಿಸುತ್ತದೆ. ಇದೊಂದು ಧನಾತ್ಮಕ ಬೆಳವಣಿಗೆಯೂ ಹೌದು ಎಂದು ಹೇಳಿದರು.

ಯುವ ಕಥೆಗಾರ ವಿನಯ ಗುಂಟೆ ಮಾತನಾಡಿ, ತಾವು ಕಥೆಗಳನ್ನು ಬರೆಯಲು ಆರಂಭಿಸಿದ ಕಾರಣ ಹಾಗೂ ಅವುಗಳನ್ನು ಹೆಣೆದ ರೀತಿ, ಕಥಾವಸ್ತುಗಳ ಹುಡುಕಾಟ ಇತ್ಯಾದಿ ವಿಚಾರಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಕಾಶಕ ಹಾಗೂ ಕವಿ ಚಾಂದ್‌ಪಾಷಾ, ಪ್ರಾಧ್ಯಾಪಕರಾದ ಡಾ.ಸತೀಶ್, ಡಾ.ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಚಿಂತಕ ಲಕ್ಷ್ಮೀನಾರಾಯಣ್, ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ರಾಜು ಸಣ್ಣಕ್ಕಿ, ಉಪನ್ಯಾಸಕ ನರಸಿಂಹಮೂರ್ತಿ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಆಯುಕ್ತ ವೆಂಕಟರಾಜು, ಡಾ.ಡಿ.ಆರ್.ನಾಗರಾಜ್‌ ಬಳಗದ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

28ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಡಾ.ಡಿ.ಆರ್.ನಾಗರಾಜ್ ಬಳಗದಿಂದ ಯುವ ಕಥೆಗಾರ ವಿನಯ ಗುಂಟೆ ಅವರ ಬನದ ಕರಡಿ ಕಥಾ ಸಂಕಲನದ ಕುರಿತು ಟೀ ವಿತ್ ಕಥೆಗಾರ ಸಂವಾದ ಕಾರ್ಯಕ್ರಮ ನಡೆಯಿತು.