ಹುಬ್ಬಳ್ಳಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ಮಂದಿಯನ್ನು ಸೇರಿಸಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವ ಮೂಲಕ ವಸತಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಅವರು ಮತ್ತೊಮ್ಮೆ ತಮ್ಮ ಸಂಘಟನಾ ಶಕ್ತಿ ಸಾಬೀತು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಹುಬ್ಬಳ್ಳಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ಮಂದಿಯನ್ನು ಸೇರಿಸಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವ ಮೂಲಕ ವಸತಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಅವರು ಮತ್ತೊಮ್ಮೆ ತಮ್ಮ ಸಂಘಟನಾ ಶಕ್ತಿ ಸಾಬೀತು ಮಾಡಿದ್ದಾರೆ.

ಇದೇ ಕಾರಣಕ್ಕೆ ಹೈಕಮಾಂಡ್‌ ಮೆಚ್ಚುಗೆಗೆ ಪಾತ್ರವಾಗಿದ್ದು, ವೇದಿಕೆ ಮೇಲೆಯೇ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಕಳೆದ ವರ್ಷ ಹೊಸಪೇಟೆಯಲ್ಲಿ ಉಸ್ತುವಾರಿ ಸಚಿವರ ಜವಾಬ್ದಾರಿ ಹೊತ್ತು ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಿದ್ದರು. ತನ್ಮೂಲಕ ರಾಹುಲ್‌ಗಾಂಧಿ ಅವರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಲು 10 ದಿನಗಳ ಕಾಲ ಅಲ್ಲೇ ವಾಸ್ತವ್ಯ ಹೂಡಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್‌ ಅಬ್ಬಯ್ಯ ಅವರ ಜತೆಗೂಡಿ ಕೆಲಸ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕೆ ರಾಹುಲ್‌ಗಾಂಧಿ, ಕೆ.ಸಿ. ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಅವರು ಸಹ ದೂರವಾಣಿ ಕರೆ ಮಾಡಿ ಸಚಿವರಿಗೆ ಅಭಿನಂದಿಸಿರುವುದಾಗಿ ಮೂಲಗಳು ತಿಳಿಸಿವೆ.

ಸಚಿವರು ಇತ್ತೀಚೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜಶ್ನೆ ಈದ್ ಮೀಲಾದುನ್ನಬಿ ಕಾರ್ಯಕ್ರಮವನ್ನೂ ನಡೆಸಿದ್ದರು. ಒಂದೇ ವರ್ಷದಲ್ಲಿ ಲಕ್ಷಾಂತರ ಜನ ಸೇರಿದ್ದ ಮೂರು ಬೃಹತ್‌ ಕಾರ್ಯಕ್ರಮ ಆಯೋಜಿಸುವ ಮೂಲಕ ಜಮೀರ್‌ ತಮ್ಮ ಸಂಘಟನಾ ಶಕ್ತಿ ಸಾಬೀತು ಮಾಡಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಜಮೀರ್ ಅಹಮದ್ ಖಾನ್ ಅವರು ಕೇವಲ ಮುಸ್ಲಿಂ ನಾಯಕರು ಮಾತ್ರವಲ್ಲದೆ ದಲಿತ ಹಾಗೂ ಹಿಂದುಳಿದ ಸಮುದಾಯ ಸೇರಿ ಎಲ್ಲ ವರ್ಗದ ನಾಯಕರಾಗಿ ಬೆಳೆಯುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಜೈ ಭೀಮ್ ಘೋಷಣೆ ಮೂಲಕ ಮಾತು ಪ್ರಾರಂಭಿಸುವ ಅವರು ನಡೆ, ನುಡಿಯಲ್ಲಿ ಎಲ್ಲಾ ವರ್ಗಗಳನ್ನೂ ಸೆಳೆಯುತ್ತಿದ್ದಾರೆ ಎಂದು ಜಮೀರ್‌ ಅಹ್ಮದ್‌ಖಾನ್‌ ಅವರ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.