ಪೈಗಂಬರ್‌ ವಿರುದ್ಧ ಯುಪಿ ಯತಿ ಹೇಳಿಕೆ ಖಂಡನೀಯ

| Published : Oct 19 2024, 12:27 AM IST

ಸಾರಾಂಶ

ಪ್ರವಾದಿ ಮಹಮ್ಮದ್ ಪೈಗಂಬರ್‌ ಬಗ್ಗೆ ಉತ್ತರ ಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ತಮ್ಮ ಭಾಷಣದಲ್ಲಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ತಂಜೀಮುಲ್‌ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್‌ ಮತ್ತು ತಂಜೀಮ್‌ ಉಲೇಮಾ ಎ-ಅಹಲೆ ಸುನ್ನತ್‌ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.

- ಧರ್ಮ, ಗುರುಗಳ ಅವಹೇಳನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮುಸ್ಲಿಂ ಧರ್ಮಗುರುಗಳ ಪ್ರತಿಭಟನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರವಾದಿ ಮಹಮ್ಮದ್ ಪೈಗಂಬರ್‌ ಬಗ್ಗೆ ಉತ್ತರ ಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ತಮ್ಮ ಭಾಷಣದಲ್ಲಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ತಂಜೀಮುಲ್‌ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್‌ ಮತ್ತು ತಂಜೀಮ್‌ ಉಲೇಮಾ ಎ-ಅಹಲೆ ಸುನ್ನತ್‌ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.

ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಮಿಲಾದ್ ಮೈದಾನದಲ್ಲಿ ಉಭಯ ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತಂಜೀಮ್ ಉಲೇಮಾ ಎ- ಅಹಲೆ ಸುನ್ನತ್ ಅಧ್ಯಕ್ಷ ಮೌಲಾನಾ ಅನೀಫ್ ರಾಜಾ ಖಾದ್ರಿ ಅವರು, ಯತಿ ನರಸಿಂಹಾನಂದ ಸ್ವಾಮೀಜಿಯವರು ಪ್ರವಾದಿ ಪೈಗಂಬರ್‌ ಹಾಗೂ ಇಸ್ಲಾಂ ಧರ್ಮ ಬಗ್ಗೆ ಪದೇಪದೇ ಅವಹೇಳನಾಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಶಾಂತಿ, ಸೌಹಾರ್ದ ಬಯಸುವ ನಾಗರೀಕರ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುವ ಕೆಲಸವನ್ನು ಯತಿಗಳು ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಪ್ರತ್ಯೇಕ ಕಾನೂನು ತರುವ ಮೂಲಕ ಎಲ್ಲ ಧರ್ಮಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ಬಾಯಿಗೆ ಲಗಾಮು ಹಾಕುವ ಕೆಲಸ ಸರ್ಕಾರ ಮಾಡಬೇಕು. ಎರಡೂ ಧರ್ಮಗಳ ಜನರು ಇಂತಹ ವಿಷ ಬೀಜ ಬಿತ್ತುವವರನ್ನು ಗುರುತಿಸಿ, ದೂರ ಇಡಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ಧರ್ಮಗುರು ಮುಫ್ತಿ ಅಯಾಜ್‌ವುಲ್ಲಾ ಮಾತನಾಡಿ, ದೇಶದಲ್ಲಿ ಎಲ್ಲರಂತೆ ಬಾಳುವ ಹಕ್ಕನ್ನು ಸಂವಿಧಾನವು ನಮಗೂ ಕೊಟ್ಟಿದೆ. ಕೆಲವರು ದೇಶದಲ್ಲಿ ಮಹಮ್ಮದ್ ಪೈಗಂಬರ್‌ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಎಲ್ಲ ಧರ್ಮ, ಧರ್ಮ ಗುರುಗಳ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುವವರ ವಿರುದ್ಧ ಲೋಕಸಭೆ ಅಧಿವೇಶನದಲ್ಲಿ ಸೂಕ್ತ ಕಾನೂನು ರಚಿಸಿ, ಅಂತಹ ಪ್ರತ್ಯೇಕ ಕಾನೂನಿನಡಿ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಸರ್ಕಾರವು ಇಂತಹ ವಿಚಾರಗಳಲ್ಲಿ ಉದಾಸೀನ ಮಾಡದೇ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಶೇಕ್ ದಾದಾಪೀರ್, ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ನಸೀರ್ ಅಹಮದ್ ರಜಾ, ಅಲಿ ರಜಾಕ್, ಮೌಲಾನಾ ಶಾಹೀದ್ ರಜಾ, ಮೌಲಾನಾ ಇಮ್ತಿಯಾಜ್ ಸಾಬ್, ಅಲೆ ರಜಾ, ಮುಖಂಡರಾದ ಜಬೀವುಲ್ಲಾ, ಖಾದರ್ ಭಾಷಾ ರಜ್ವಿ, ಮಹಮ್ಮದ್ ಸಾಬ್, ಶಹನವಾಜ್ ಖಾನ್‌, ಸೈಯದ್ ಶಫೀವುಲ್ಲಾ, ಆರೀಫ್, ಮಹಮ್ಮದ್ ಅಲಿ, ಎ.ಬಿ.ಹಬೀಬ್ ಸಾಬ್, ಅಫ್ರೋಜ್ ರಜಾ ಇತರರು ಇದ್ದರು. ನಂತರ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.

- - -

-(ಫೋಟೋ ಇದೆ)