ಉಪ್ಪಿನಂಗಡಿ: ಶನಿವಾರ ಮತ್ತು ಭಾನುವಾರ ಅಪಾಯದ ಮಟ್ಟದ ಸನಿಹದಲ್ಲಿ ಹರಿದು ನೆರೆ ಭೀತಿ ಮೂಡಿಸಿದ್ದ ಇಲ್ಲಿನ ಕುಮಾರಧಾರ ಮತ್ತು ನೇತ್ರಾವತಿ ಎರಡೂ ನದಿಗಳಲ್ಲಿ ನೀರಿನ ಪ್ರವಾಹ ಗಣನೀಯವಾಗಿ ಕಡಿಮೆ ಆಗಿದ್ದು, ಸೋಮವಾರ ಸಾಯಂಕಾಲದ ಸುಮಾರಿಗೆ 27.4 ಮೀಟರ್ ದಾಖಲಾಗಿ ನೆರೆ ಭೀತಿ ದೂರಮಾಡಿದೆ.

ಭಾನುವಾರ ಈ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದ ಕಾರಣ ನದಿಗಳಲ್ಲಿ ಪ್ರವಾಹ ಹೆಚ್ಚಾಗಿತ್ತು. ಪರಿಣಾಮ ನದಿಯ ನೀರಿನ ಮಟ್ಟ ಸಮುದ್ರಮಟ್ಟಕಿಂತ 30.3 ಮೀಟರ್ ನಷ್ಟು ಇತ್ತು. ಆದರೆ ಭಾನುವಾರ ಸಂಜೆಯಿಂದ ಇಳಿಮುಖ ಕಾಣಿಸಿದ ನದಿಯ ನೀರಿನ ಗಣನೀಯ ಇಳಿಕೆ ದಾಖಲಿಸಿದೆ. ನೇತ್ರಾವತಿ ನೀರಿನ ಮಟ್ಟ ಇಳಿಕೆ: ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದ ಪ್ರವಾಹದ ಪರಿಸ್ಥಿತಿಗೆ ಕಾರಣವಾದ ನೇತ್ರಾವತಿಯಲ್ಲಿ ನೀರಿನ ಮಟ್ಟ ಸೋಮವಾರ ಸಂಜೆ ಇಳಿಮುಖವಾಗಿದೆ. ಭಾನುವಾರ ಸಂಜೆ ವೇಳೆ ಬಂಟ್ವಾಳದಲ್ಲಿ ನದಿಯ ನೀರಿನ ಮಟ್ಟ 8.3 ಮೀ. ಇತ್ತು. ಇದು ಸೋಮವಾರ ಸಂಜೆ 6.4 ಮೀ.ಗೆ ಇಳಿಕೆಯಾಗಿದೆ.ಪಾಣೆಮಂಗಳೂರು ಆಲಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬಂಟ್ವಾಳದ ಕೆಲವೆಡೆ ಮನೆ, ಅಂಗಡಿಗಳಿಗೆ ನುಗ್ಗಿದ ನೆರೆ ನೀರು ಸೋಮವಾರ ಬೆಳಗ್ಗೆ ಇಳಿದಿದೆ. ಕೆಲವೆಡೆ ತೋಟದಲ್ಲಿ ನೆರೆ ನೀರು ಇನ್ನೂ ಇದೆ. ಡ್ಯಾಮ್ ನಲ್ಲಿರುವ ನೀರನ್ನು ಆಗಾಗಿ ಹೊರಬಿಡುವ ಸಂದರ್ಭದಲ್ಲಿ ನದಿಯ ಇಕ್ಕೆಲಗಳಲ್ಲಿ ನೀರಿನ ಮಟ್ಟ ಏರುತ್ತಿದೆ.