ಇಂದಿರಾಗಾಂಧಿ ದೊಡ್ಡ ಮೈಲಿಗಲ್ಲು

| Published : Nov 03 2025, 02:03 AM IST

ಸಾರಾಂಶ

ಭಾರತದ ಮಹಿಳಾ ರಾಜಕಾರಣದ ಅಧಿಪತ್ಯಕ್ಕೆ ಅಡಿಗಲ್ಲನ್ನು ಹಾಕಿಕೊಟ್ಟ ಇಂದಿರಾಗಾಂಧಿ ಎಂಬುದನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಭದ್ರತೆಗೆ ದೊಡ್ಡ ಸವಾಲುಗಳು ಇದ್ದ ವೇಳೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಕಾಂಗ್ರೆಸ್ ಪಕ್ಷ ಹಾಗು ಈ ದೇಶವನ್ನು ಮುನ್ನಡೆಸಿದ ರೀತಿ ಒಂದು ದೊಡ್ಡ ಮೈಲಿಗಲ್ಲು ಎಂದು ಸಣ್ಣ ನೀರಾವರಿ ಸಚಿವ ಎಸ್. ಬೋಸರಾಜ್ ತಿಳಿಸಿದರು.ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯ್‌ ಪಟೇಲ್ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಭಾರತದ ಮಹಿಳಾ ರಾಜಕಾರಣದ ಅಧಿಪತ್ಯಕ್ಕೆ ಅಡಿಗಲ್ಲನ್ನು ಹಾಕಿಕೊಟ್ಟ ಇಂದಿರಾಗಾಂಧಿ ಎಂಬುದನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ. ಭಾರತದ ಹೆಗ್ಗುರುತು ಇಂದಿರಾ ಗಾಂಧಿ ಅವರನ್ನು ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳೇ ಹತ್ತೆಗೈದ ದಿನ. ದೇಶದ ಮಟ್ಟಿಗೆ ಇದೊಂದು ಕರಾಳ ದಿನ ಎಂದು ಹೇಳಿದರು.ಚಿಂತಕಿ ಡಾ. ಶೈಲಾ ಮಾತನಾಡಿ, ಭಾರತದ ಧೀಮಂತ ಮಹಿಳೆ ಇಂದಿರಾಗಾಂಧಿ ರಾಜಕೀಯ ಕುಟುಂಬದವರಾದರೂ ಅವರಿಗಿದ್ದ ಸವಾಲುಗಳು ಬೆಟ್ಟದಷ್ಟು. ಸ್ವಾತಂತ್ರದ ಹೋರಾಟದಲ್ಲಿ ಭಾಗಿಯಾಗಿ ದೇಶವನ್ನು ಬ್ರಿಟಿಷರಿಂದ ವಿಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರು ಕುಟುಂಬದ ಕುಡಿ ಎಂದು ಕೊಂಡಾಡಿದರು.ಸರೋಜಾ ತುಳಸಿದಾಸಪ್ಪ ಮಾತನಾಡಿ, ಇಂದಿರಾ ಗಾಂಧಿ ಮೈಸೂರಿಗೆ ಭೇಟಿ ನೀಡಿದಾಗ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಆಗ ನಾನು ಇಂದಿರಾಗಾಂಧಿಯವರ ಜೊತೆ ಒಡನಾಟ ಹೊಂದಿದ್ದೆ ಎಂಬ ಐತಿಹಾಸಿಕ ಘಟನೆ ನೆನೆದುಕೊಂಡರು. ತುಳಸಿ ದಾಸಪ್ಪ ಅವರನ್ನು ಇಂದಿರಾ ಗಾಂಧಿಯವರು ಪ್ರೀತಿಯಿಂದ ತುಳಸಿ ಎಂದು ಕರೆಯುತ್ತಿದ್ದಾಗಿ ಅವರು ಸ್ಮರಿಸಿದರು.ಮೈಲ್ಯಾಕ್‌ ಅಧ್ಯಕ್ಷ ಎಚ್.ಡಿ. ಗಣೇಶ್, ಮಾಜಿ ಮೇಯರ್‌ಗಳಾದ ಮೋದಾಮಣಿ, ಬಿ.ಕೆ. ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಟಿ.ಬಿ. ಚಿಕ್ಕಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಪದಾಧಿಕಾರಿಗಳಾದ ಮಂಚೇಗೌಡನ ಕೊಪ್ಪಲು ರವಿ, ಈಶ್ವರ್ ಡಿ. ಚಕ್ಕಡಿ, ಶಿವಪ್ರಸಾದ್, ಸುನಂದ್ ಕುಮಾರ್ ಮೊದಲಾದವರು ಇದ್ದರು.