ಸಾರಾಂಶ
ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಯನ್ನು ಹೆಚ್ಚು ಬಳಸುತ್ತಿಲ್ಲ. ಕನ್ನಡಿಗರಾದ ನಾವು ಕನ್ನಡವನ್ನು ಹೆಚ್ಚು ಮಾತನಾಡಬೇಕು. ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದಲ್ಲಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದ ಮಾತನ್ನು ಉಳಿಸಿಕೊಳ್ಳಬೇಕಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾವು ಬಳಸುವ ದಿನಪತ್ರಿಕೆಗಳು, ಹಾಕುವ ಫಲಕಗಳು, ಕೊಡುವ ವಿಳಾಸಗಳೆಲ್ಲವೂ ಕನ್ನಡ ಮಯವಾದರೆ ಕನ್ನಡವನ್ನು ಉಳಿಸಲು ಸಾಧ್ಯ ಎಂದು ಮಂಡ್ಯ ಪಿಇಎಸ್ ಪದವಿ ಕಾಲೇಜಿನ ಉಪನ್ಯಾಸಕಿ ಡಾ.ಅನಿತಾ ಮಂಗಲ ತಿಳಿಸಿದರು.ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಕುರಿತು ಉಪನ್ಯಾಸ ನೀಡಿ, ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಯನ್ನು ಹೆಚ್ಚು ಬಳಸುತ್ತಿಲ್ಲ. ಕನ್ನಡಿಗರಾದ ನಾವು ಕನ್ನಡವನ್ನು ಹೆಚ್ಚು ಮಾತನಾಡಬೇಕು. ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದಲ್ಲಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದರು.
ನಂತರ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕನ್ನಡಕ್ಕೆ 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪ್ರಸ್ತುತ ಪ್ರಪಂಚ ಇಂಗ್ಲಿಷ್ ಮಯವಾಗಿದೆ. ನಮ್ಮ ಕನ್ನಡ ಭಾಷೆಯನ್ನು ತಿರಸ್ಕರಿಸಿ ಅನ್ಯ ಭಾಷೆಗೆ ಹೆಚ್ಚು ಒತ್ತು ನೀಡಬೇಡಿ. ಸರ್ಕಾರ ಕೂಡ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸರ್ಕಾರಿ ಶಾಲೆಗಳಲ್ಲಿ ಪಬ್ಲಿಕ್ ಶಾಲೆಗಳನ್ನು ತೆರೆದಿದ್ದು ಎಲ್ ಕೆಜಿಯಿಂದಲೇ ಪ್ರಾರಂಭಿಸಿದೆ ಎಂದು ಹೇಳಿದರು.ಇದೇ ವೇಳೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಬಾರಿಯ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಭಾಷೆ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮುನ್ನ ಪುರಸಭೆ ಕಚೇರಿಯಲ್ಲಿ ನಾಡಧ್ವಜವನ್ನು ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್ ನೆರವೇರಿಸಿದರು. ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಂಡ ತಾಯಿ ಕನ್ನಡಾಂಬೆ ತೇರನ್ನು ಪಟ್ಟಣದ ಮುಖ್ಯ ಬೀದಿಯಲ್ಲಿ ಮಂಗಳ ವಾದ್ಯದೊಂದಿಗೆ ಶ್ರೀರಂಗನಾಥ ಮೈದಾನದವರೆಗೆ ಶಾಲಾ ಮಕ್ಕಳೊಂದಿಗೆ ಮೆರವಣಿಗೆ ನಡೆಸಿ, ಶ್ರೀರಂಗನಾಥ ಸ್ವಾಮಿ ಮೈದಾನದಲ್ಲಿ ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಚೇತನಾ ಯಾದವ್ ರಾಷ್ಟ್ರ ಧ್ವಜಾರೋಣ ಕಾರ್ಯ ನಡೆಸಿದರು.ನಂತರ ಶಾಸಕ ರಮೇಶ ಬಂಡಿಸಿದ್ದೆಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ವೇಣು, ಮುಖ್ಯಾಧಿಕಾರಿ ಸತೀಶ್, ಬಿಇಒ ನಂದೀಶ್, ಕಸಾಪ ಅಧ್ಯಕ್ಷ ಸಿದ್ದಲಿಂಗು, ಪುರಸಭಾ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು , ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.
;Resize=(128,128))
;Resize=(128,128))