ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗಾಗಿ ಪ್ರಾರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಂಡು ಪರಿಹಾರ ಹಣ ಹಾಗೂ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವಂತೆ ಒತ್ತಾಯಿಸಿ ಭೂ ಮಾಲೀಕರು ಮಂಗಳವಾರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರನ್ನು ಭೇಟಿಯಾದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಮಾಲೀಕರು, ಈ ಯೋಜನೆಗೆ ಶೇಕಡ 80 ರಿಂದ 90 ರಷ್ಟು ಭೂಮಾಲೀಕರಿಗೆ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡಿರುವ ಭೂಪರಿಹಾರ ಮೊತ್ತಕ್ಕೆ ಒಪ್ಪಿಗೆ ಇದೆ. ಆದ್ದರಿಂದ ನಾವುಗಳು ಭೂಸ್ವಾಧೀನ ಪರವಾಗಿದ್ದೇವೆ. ಯಾವುದೇ ಕಾರಣಕ್ಕೂ ನಕಾರಾತ್ಮಕ ಹಾಗೂ ಅಭಿವೃದ್ಧಿ ವಿರೋಧಿ ಮತ್ತು ರೈತ ಹಿತವಿರೋಧಿ ಶಕ್ತಿಗಳಿಗೆ ಮಣಿಯಬಾರದೆಂದು ಒತ್ತಾಯಿಸಿದರು.

ಮನವಿ ಪತ್ರದಲ್ಲಿ ಏನಿದೆ ?

ನಾವುಗಳು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಗ್ರೇಟರ್ ಬೆಂಗಳೂರು ಟೌನ್‌ಶಿಪ್‌ಗಾಗಿ ಗುರುತಿಸಿರುವ 9 ಗ್ರಾಮಗಳ ಜಮೀನುಗಳ ಮಾಲೀಕರಾಗಿದ್ದೇವೆ. ಈ ಟೌನ್‌ಶಿಪ್‌ಗಾಗಿ 2006 ರಲ್ಲಿಯೇ ನಮ್ಮ ಜಮೀನುಗಳನ್ನು ಗುರುತಿಸಲಾಗಿದೆ. ಆನಂತರ 2007-2008 ರಲ್ಲಿ ಟೌನ್‌ಶಿಪ್ ಮಾಡಲು ಶುರು ಮಾಡಿ ನಿಲ್ಲಿಸಲಾಗಿತ್ತು. ಮತ್ತೆ 2010-2011 ರಲ್ಲಿ ಇನ್ನೊಂದು ಸಲ ಟೆಂಡರ್ ಮಾಡಿ ಅಲ್ಲಿಗೆ ನಿಲ್ಲಿಸಲಾಗಿತ್ತು.

ಈಗ ನಾವು ಸಾಕಷ್ಟು ತೊಂದರೆ ಅನುಭವಿಸಿಕೊಂಡು ಕಳೆದ 18 ವರ್ಷಗಳಿಂದ ನಮ್ಮ ಜಮೀನುಗಳನ್ನು ಅಭಿವೃದ್ಧಿಪಡಿಸಲಾಗದೆ ತೊಂದರೆಗೀಡಾಗಿದ್ದೇವೆ. ಆದ್ದರಿಂದ ಟೌನ್‌ ಶಿಪ್ ಮಾಡಿ ಇಲ್ಲವಾದರೆ ನಮಗೆ ಅಭಿವೃದ್ಧಿಗೆ ಅವಕಾಶ ಕೊಡಿ ಎಂದು ನಾವು ಕೇಳಿದ್ದೇವು. ಆಗ ಸರ್ಕಾರ ನಿರ್ಣಯ ತೆಗೆದುಕೊಂಡು 2025ರ ಮಾರ್ಚ್ 12ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 9 ಗ್ರಾಮಗಳ ಸುಮಾರು 7500 ಸಾವಿರ ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತ್ತು.


ಆನಂತರ ನಮ್ಮಗಳ ಜಮೀನುಗಳನ್ನು ಜಿ.ಎಂ.ಸಿ ಕೂಡ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಹಾರ ದರ ನಿಗದಿ ಕೂಡ ಆಗಿದೆ. ಈ ಸಂಬಂಧ ಶಾಸಕರು ರೈತರೊಂದಿಗೆ ಸಭೆ ಮಾಡಿ ವಿವರವಾಗಿ ರೈತರುಗಳಿಗೆ ಏನೆಲ್ಲಾ ಸಿಗುತ್ತೆ ಎಂದು ತಿಳಿಸಿ, ಕರಪತ್ರ ಕೊಟ್ಟಿದ್ದಾರೆ.

ಆದರೆ, ಕೆಲವು ಭೂಮಾಲೀಕರು ದಲ್ಲಾಳಿಗಳು ಮತ್ತು ಜಮೀನು ಇಲ್ಲದಿರುವ ವ್ಯಕ್ತಿಗಳು ಸೇರಿಕೊಂಡು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಜಮೀನುಗಳಿಗೆ ಸಂಬಂಧಿಸಿದಂತೆ ವಿರೋಧ ಇದ್ದರೆ ಕಾನೂನು ರೀತಿ ತಾವು ಕ್ರಮ ಕೈಗೊಳ್ಳಬಹುದಾಗಿದೆ. ಆದರೆ, ಅವರು ರೈತರು/ಭೂಮಾಲೀಕರ ಪರವಾಗಿ ಇರುವಂತೆ ಬಿಂಬಿಸುತ್ತಿದ್ದಾರೆ. ಇದು ಸತ್ಯವಲ್ಲ. ಅಭಿವೃದ್ಧಿ ವಿರೋಧಿ ಮತ್ತು ರೈತ ಹಿತವಿರೋಧಿ ಶಕ್ತಿಗಳಿಗೆ ಜಿಲ್ಲಾಡಳಿತ ಮಣಿಯಬಾರದೆಂದು ಭೂ ಮಾಲೀಕರು ಒತ್ತಾಯಿಸಿದರು.

ಈಗಾಗಲೇ ರೈತರು 2 ದಶಕಗಳಿಂದ ಯಾವುದೇ ಅಭಿವೃದ್ಧಿ ಇಲ್ಲದಂತೆ ಸೊರಗಿದ್ದಾರೆ. ಎರಡು ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಒಂದು ಪೆಟ್ರೋಲ್ ಬಂಕ್ ಕೂಡ ಇಲ್ಲ. ಒಳ್ಳೆಯ ಲೇಔಟ್ , ಆಟದ ಮೈದಾನ , ಆಸ್ಪತ್ರೆ ಇಲ್ಲ. ಭೈರಮಂಗಲ ಕೆರೆ ಸಂಪೂರ್ಣವಾಗಿ ಕಲುಷಿತವಾಗಿದ್ದು, ಈ ನೀರನ್ನೇ ಬಳಸಿ ನಾವು ಬೆಳೆ ಬೆಳೆಯಬೇಕಾಗಿದೆ. ಕುಡಿಯುವ ನೀರಿಗೂ ಕೂಡ ಕಲುಷಿತ ನೀರು ಸೇರಿಕೊಂಡಿದೆ. ಮಧ್ಯ ವಯಸ್ಸು ದಾಟಿದ ಸಾಕಷ್ಟು ಜನರಿಗೆ ರೋಗರುಜಿನಗಳು ಹೆಚ್ಚಾಗಿದೆ. ಕ್ಯಾನ್ಸರ್ ಕಾಯಿಲೆಗಳು ಕೂಡ ತುಂಬಾ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಈ ರೀತಿ ಜನರ ಜೀವನ ಸಾಕಷ್ಟು ಕಷ್ಟಮಯವಾಗಿದೆ.

ಆದ್ದರಿಂದ ಈ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸಲು ನಮ್ಮ ಸಂಪೂರ್ಣ ಸಹಕಾರ ಇದೆ. ಇನ್ನೂ ಹೆಚ್ಚಿನ ವಿಳಂಬವಾದಲ್ಲಿ ನಮಗೆ ತುಂಬಾ ಕಷ್ಟವಾಗುತ್ತದೆ. ಮಕ್ಕಳ ಮದುವೆ , ಉದ್ಯೋಗ ಹಾಗೂ ಇತರ ಅವಶ್ಯಕತೆಗಳಿಗೆ ಹಣ ಅವಶ್ಯಕತೆ ಇರುವುದರಿಂದ ತುರ್ತಾಗಿ ಟೌನ್‌ ಶಿಪ್ ಕಾರ್ಯ ಅನುಷ್ಠಾನ ಮಾಡುವಂತೆ ಭೂ ಮಾಲೀಕರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭೂ ಮಾಲೀಕರಾದ ಎಚ್.ಸಿ.ರಾಜಣ್ಣ, ಎಚ್.ಎಸ್.ಸಿದ್ದರಾಜು, ಎಚ್.ಟಿ.ನರಸಿಂಹಮೂರ್ತಿ, ಶಿವರಾಮು, ನಾಗೇಶ್ , ಶಿವಕುಮಾರ್ , ಎಂ.ವಿ.ಮಂಜುನಾಥ್ , ನಂದೀಶ್ , ಹರೀಶ್ , ಪ್ರಕಾಶ್ , ಜಯರಾಮು, ಮುನಿರಾಜು, ಭರತ್, ಶೇಖರ್ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್ ..........

ಭೂ ಮಾಲೀಕರ ಹಕ್ಕೋತ್ತಾಯಗಳೇನು ?

1. ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಲು ಪ್ರಾಧಿಕಾರ ಕ್ರಮವಹಿಸಬೇಕು.

2. ಕೂಡಲೇ ಪರಿಹಾರ ಹಣವನ್ನು ನೀಡುವುದು ಮತ್ತು ನೇರವಾಗಿ ರೈತರ/ಭೂಮಾಲೀಕರ ಖಾತೆಗೆ ಹಾಕುವುದು.

3. ಮುಂದಿನ 2 ವರ್ಷಗಳ ಒಳಗಾಗಿ ಅಭಿವೃದ್ಧಿಪಡಿಸಿದ ಸೈಟುಗಳನ್ನು ನೀಡುವುದು. ಈ ಸಂಬಂಧ ಪರಿಹಾರ ಹಣ ನೀಡುವಾಗಲೇ ನಮಗೆ ಎಷ್ಟು ನಿವೇಶನ ನೀಡಲಾಗುತ್ತದೆ ಎಂದು ಪ್ರಮಾಣ ಪತ್ರ ನೀಡುವುದು.

4. ಸ್ಥಳೀಯರಿಗೆ ಉದ್ಯೋಗ ಕೊಡುವ ಬಗ್ಗೆ ನೀತಿ ರೂಪಿಸಬೇಕು. ನಮ್ಮ ಗ್ರಾಮಗಳನ್ನು ಸಹಾ ಬಡಾವಣೆಯಲ್ಲಿನಂತೆ ಎಲ್ಲಾ ಸೌಕರ್ಯಗಳನ್ನು ಕೊಟ್ಟು ಅಭಿವೃದ್ಧಿಪಡಿಸಬೇಕು.

5. ನಿವೇಶನ ನೀಡುವವರೆಗೆ ರೈತರು ಬದುಕಲು ಅನುವಾಗುವಂತೆ ಮುಂದಿನ 3 ವರ್ಷದವರೆಗೆ ವಾರ್ಷಿಕ ಭತ್ಯೆ ಕೊಡಬೇಕು.

6.ರೈತರ ಸೋಗಿನಲ್ಲಿ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಬೇಕು. ಈ ಪೂರ್ಣ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡಬಾರದು.

7. ಭೂಸ್ವಾಧೀನ ಪರವಾಗಿರುವ ರೈತರ ವಿರುದ್ಧ ಅವಹೇಳನಕಾರಿಯಾಗಿ ಅವಮಾನ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಬೇಕು.

12ಕೆಆರ್ ಎಂಎನ್ 4.ಜೆಪಿಜಿ

ಭೂ ಮಾಲೀಕರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.