ಮಣ್ಣು ಪರೀಕ್ಷೆ ಆಧಾರದ ಮೇಲೆ ಸರಿಯಾದ ಪ್ರಮಾಣದಲ್ಲಿ, ಸಮಯದಲ್ಲಿ ಮತ್ತು ಜಾಗದಲ್ಲಿ ಗೊಬ್ಬರಗಳನ್ನು ಉಪಯೋಗಿಸಿದಾಗ ಹೆಚ್ಚಿನ ಲಾಭಗಳನ್ನು ಪಡೆಯಬಹುದು ಎಂದು ಅಪೆಡಾ ವಲಯ ಸಹಾಯಕ ವ್ಯವಸ್ಥಾಪಕ ಯು.ಧರ್ಮರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮಣ್ಣು ಪರೀಕ್ಷೆ ಆಧಾರದ ಮೇಲೆ ಸರಿಯಾದ ಪ್ರಮಾಣದಲ್ಲಿ, ಸಮಯದಲ್ಲಿ ಮತ್ತು ಜಾಗದಲ್ಲಿ ಗೊಬ್ಬರಗಳನ್ನು ಉಪಯೋಗಿಸಿದಾಗ ಹೆಚ್ಚಿನ ಲಾಭಗಳನ್ನು ಪಡೆಯಬಹುದು ಎಂದು ಅಪೆಡಾ ವಲಯ ಸಹಾಯಕ ವ್ಯವಸ್ಥಾಪಕ ಯು.ಧರ್ಮರಾವ್ ತಿಳಿಸಿದರು. ತಾಲ್ಲೂಕಿ ಸಿ.ಎಸ್ ಪುರ ಹೋಬಳಿಯ ನೆಟ್ಟೇಕೆರೆ ಗ್ರಾಮದಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ತೋಟಗಾರಿಕೆ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಡಿಕೆ ಬೆಳೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಅಡಿಕೆ ಉತ್ಪನ್ನಗಳ ರಫ್ತು ಅವಕಾಶ ಕರಿತು ಕಾರ್ಯಾಗಾರದಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸುಮಾರು 22 ಸಾವಿರಕ್ಕೂ ಅಧಿಕ ಹೆಕ್ಟೇರ್ ಅಡಿಕೆ ಬೆಳೆ ಬೆಳೆಯುತ್ತಿರುವ ರೈತರು ಇರುವುದರಿಂದ ಗುಬ್ಬಿಯಲ್ಲಿ ಈ ಕಾರ್ಯಗಾರ ಮಾಡಲಾಗುತ್ತಿದೆ. ಜಾಗತೀಕರಣ ಯುಗದಲ್ಲಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ಪನ್ನಗಳನ್ನು ಬೆಳೆಯಬೇಕು. ಅಡಿಕೆಯಲ್ಲಿ ಮೌಲ್ಯವರ್ಧನೆ ಮಾಡುವ ಮೂಲಕ ಅಡಿಕೆ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅಡಿಕೆಯನ್ನು ಬಣ್ಣಕ್ಕೆ, ಟೀಗೆ, ಪ್ಲೇಟ್ ಮಾಡಲು, ಗೊಬ್ಬರ ಮಾಡಲು ಮುಂತಾದ ಉತ್ಪನ್ನಗಳಿಗೆ ಅಡಿಕೆಯನ್ನು ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಅಡಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಜೊತೆಗೆ ಹಲವಾರು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ಕುಂದರನಹಳ್ಳಿ ರಮೇಶ್ ಮಾತನಾಡಿ, ಗೋರಕ್ ವರದಿಯ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಅಂತರ್ಜಲ ಕಡಿಮೆಯಾಗುವುದರಿಂದ ಈ ಭಾಗದಲ್ಲಿ ಅಡಿಕೆ ಬೆಳೆಯನ್ನು ಬೆಳೆಯುವುದನ್ನು ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. ಅದ್ದರಿಂದ ನೀವು ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು ಎಂದಯ ಹೇಳಿದರು.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಶಾರದಮ್ಮ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಅನೇಕ ಸಬ್ಸಿಡಿಯ ಸೌಲಭ್ಯಗಳಿದ್ದು ಅವುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬಹುದು ಅಡಿಕೆಯನ್ನು ಹೊರತುಪಡಿಸಿ ತೋಟಗಾರಿಕೆ ಬೆಳೆಗಳಿಗೆ ಡ್ರಿಪ್ ಅಳವಡಿಸಿಕೊಳ್ಳಲು ಸಬ್ಸಿಡಿಯನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಗಾರದಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಲೋಗಾನಂದ್, ವಿಜ್ಞಾನಿ ಡಾ.ದರ್ಶನ್, ತೋಟಗಾರಿಕಾ ಹಿರಿಯ ತೋಟಗಾರಿಕೆ ಅಧಿಕಾರಿ ಪುಷ್ಪಲತಾ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಅಪೆಡಾದ ಡಾ.ಬಿ.ಕೆ.ಪೂಜಾ, ಬಿ.ಕಾರಂತ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಎನ್ ಎಸ್.ಚನ್ನೇಗೌಡ, ನಿವೃತ್ತ ಕೃಷಿ ವಿಸ್ತಾರಣಾಧಿಕಾರಿ ಡಾ.ಎನ್.ಎಸ್.ಶಿವಲಿಂಗೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಸದಾಶಿವಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಎಸ್.ಮೀನಾಕ್ಷಿ, ಜಗದೀಶ್ ಪಾಟಿಲ್ ಇಲಾಖೆಯ ಸಿಬ್ಬಂದಿಗಳು ಪ್ರಗತಿಪರ ರೈತರುಗಳು ಇತರರು ಇದ್ದರು.