ಮೊದಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದವು. ನಂತರದ ವರ್ಷದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಹುಬ್ಬಳ್ಳಿ:

ಧಾರವಾಡದ ಕೃಷಿ ಮೇಳದಂತೆ ಫಲಪುಷ್ಪ ಪ್ರದರ್ಶನವನ್ನು ಹೆಸರುವಾಸಿಯಾಗುವ ರೀತಿಯಲ್ಲಿ ಆಯೋಜಿಸುವ ಚಿಂತನೆ ಮಾಡಲಾಗುತ್ತಿದೆ ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಧಾರವಾಡ ಜಿಪಂ, ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ, ವಾಣಿಜ್ಯ ಮೇಳ, ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಬಹುಮಾನ ವಿತರಿಸಿ ಮಾತನಾಡಿದರು.

ಮೊದಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದವು. ನಂತರದ ವರ್ಷದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಈ ವರ್ಷ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಎನ್‌‌ಆರ್‌‌ಎಲ್‌ಎಂ ಇಲಾಖೆಗಳು ಒಗ್ಗೂಡಿ ಪ್ರದರ್ಶನ ಆಯೋಜಿಸಿವೆ. ಮುಂದಿನ ವರ್ಷದಲ್ಲಿ ಈ ಎಲ್ಲ ಇಲಾಖೆಗಳ ಜತೆಗೆ ಗ್ರಾಮೀಣ ಕೈಗಾರಿಕೆ, ಪಶು ಇಲಾಖೆಗಳನ್ನು ಸಹ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.

ಉದ್ಯಾನ ಮತ್ತು ಫಲಪುಷ್ಪ ಪ್ರದರ್ಶನ ಸಮಿತಿಯ ಸಂಚಾಲಕ ಎ.ಜಿ. ದೇಶಪಾಂಡೆ ಮಾತನಾಡಿ, ಡಿ.ಕೆ. ನಾಯ್ಕ ಅವರು ಇಂದಿರಾ ಗಾಜಿನ ಮನೆ ಹಾಗೂ ಈಜುಕೊಳಕ್ಕೆ ಜಾಗ ನೀಡಿದ್ದರು. ಇಂದಿರಾ ಗಾಜಿನ ಮನೆಯ ಉದ್ಯಾನ ಕಳೆ ಕಟ್ಟುವ ರೀತಿಯಲ್ಲಿ ಆಗಬೇಕಿದೆ. ನೃಪತುಂಗ ಬೆಟ್ಟ, ನವಲೂರು ಬೆಟ್ಟ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.‌

ಧಾರವಾಡ ಜಿಲ್ಲಾ ಹಾಪ್ ಕಾಮ್ಸ್‌ ಅಧ್ಯಕ್ಷ ಚನ್ನಬಸಪ್ಪ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಉದ್ಯಾನವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕೃಷಿ ವಿವಿ ನಿವೃತ್ತ ಡೀನ್ ಡಾ. ವಿ.ಎಸ್. ಪಾಟೀಲ, ಕೆಎಂಸಿಆರ್‌‌‌ಐ ಪ್ರಾಧ್ಯಾಪಕ ಸೂರ್ಯಕಾಂತ ಕಲ್ಲೂರ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ್ ಭದ್ರಣ್ಣವರ, ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಮಹ್ಮದ್ ಫಿರೋಜ್, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ತೋಟಗಾರಿಕೆ ಇಲಾಖೆಯ ಯೋಗೇಶ ಕಿಲಾರಿ ಸೇರಿದಂತೆ ರೈತ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶ್ರೀಕಾಂತ ಪತ್ತಾರ ಸ್ವಾಗತಿಸಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವರುಣ ಅಮೀನಗಡ ವರದಿ ವಾಚಿಸಿದರು. ವಿಜಯಕುಮಾರ ರಾಗಿ ನಿರೂಪಿಸಿ, ವಂದಿಸಿದರು.