ಡಿ.೨೧ ರಿಂದ ೨೪ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ.

ಕಾರಟಗಿ: ಸರ್ಕಾರ ದೇಶವನ್ನು ಪೋಲಿಯೋ ಮುಕ್ತ ಸಮಾಜವನ್ನಾಗಿಸಲು ಉಚಿತ ಪಲ್ಸ್‌ ಪೋಲಿಯೋ ಲಸಿಕೆ ನೀಡುತ್ತಿದ್ದು, ಜಿಲ್ಲೆಯ ಐದು ವರ್ಷದ ಎಲ್ಲ ಮಕ್ಕಳಿಗೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಸಹಯೋಗದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಿ.೨೧ ರಿಂದ ೨೪ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಿ. ಸರ್ಕಾರ ಪೋಲಿಯೋ ಮುಕ್ತ ಸಮಾಜವನ್ನಾಗಿಸಲು ಉಚಿತ ಲಸಿಕೆಯನ್ನು ಡಿ.೨೧ರಿಂದ ಆರಂಭಿಸಿದ್ದು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು ೪೧ ಭೂತಗಳನ್ನು ಸ್ಥಾಪಿಸಿದೆ ಎಂದರು.

ಕಾರಟಗಿ ಸಮುದಾಯ ಆರೋಗ್ಯದ ವ್ಯಾಪ್ತಿಯಲ್ಲಿನ ೬೪೯೨ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಇಲಾಖೆ ಹೊಂದಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ೫ ವರ್ಷದೊಳಗಿನ ಮಕ್ಕಳು ಪಲ್ಸ್‌ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಇತರೆಡೆ ವಾಸಿಸುವ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಬೇಕು ಎಂದು ಸಚಿವರು ಸೂಚಿಸಿದರು.

ಪೋಲಿಯೋ ಹನಿ ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಪೋಲಿಯೋ ಕಾಯಿಲೆ ಎಲ್ಲರಿಗೂ ಒಂದೇ ಆಗಿದೆ. ಇಂದಿನಿಂದ ಜಿಲ್ಲಾದ್ಯಂತ ವಿವಿಧೆಡೆಗಳಲ್ಲಿ ಮೂರು ದಿನಗಳವರೆಗೆ ಇಲಾಖೆ ಸ್ಥಾಪಿಸಿದ ಭೂತಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಅಲ್ಲದೆ ಡಿ.೨೨ ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನಗೆ ತೆರಳಿ ಲಸಿಕೆ ಹಾಕುತ್ತಾರೆ. ಎಂದರು.

ಈ ವೇಳೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಎಸ್ಪಿ ಡಾ.ರಾಮ್ ಎಲ್ ಅರಸಿದ್ಧಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರ, ಕುಷ್ಟರೋಗ ನಿಯಂತ್ರಾಣಾಧಿಕಾರಿ ಡಾ. ಪ್ರಕಾಶ, ತಾಲೂಕು ವೈದ್ಯಾಧಿಕಾರಿ ಡಾ. ಗೌರಿ ಶಂಕರ್, ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಪಟ್ಟಣಶೇಟ್ಟಿ, ಆರೋಗ್ಯ ರಕ್ಷಾ ಸದಸ್ಯ ತುಳಜಾರಾಮ ಸಿಂಘ್ರಿ, ಹನಮೇಶ ಡಾ.ನಾಗರಾಜ, ಡಾ. ವೀರಭದ್ರಗೌಡ, ಡಾ. ಅರ್ಪಿತಾ ಲೂಬೋ, ಡಾ. ರಾಮಪ್ಪ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.