ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ವಚನ ಸಂಗ್ರಹಗಳ ಸೇವೆಗೆ ಹಾನಗಲ್ಲಿನ ಲಿಂ. ಕುಮಾರ ಶಿವಯೋಗಿಗಳು ಬಲವಾಗಿ ನಿಂತಿದ್ದರಿಂದ ವಚನ ಪ್ರಸಾರಕ್ಕೆ ಸಹಕಾರಿಯಾಯಿತು. ಮುಂದುವರಿದ ಭಾಗವಾಗಿ ನಾವೆಲ್ಲರೂ ವಚನಗಳ ಸಾರವನ್ನು ಜನರ ಮನೆ-ಮನೆಗಳಿಗೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು ಎಂದು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಮ್ಮ ಉದಾಸಿ ಕರೆ ನೀಡಿದರು.
ಹಾನಗಲ್ಲ:ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ವಚನ ಸಂಗ್ರಹಗಳ ಸೇವೆಗೆ ಹಾನಗಲ್ಲಿನ ಲಿಂ. ಕುಮಾರ ಶಿವಯೋಗಿಗಳು ಬಲವಾಗಿ ನಿಂತಿದ್ದರಿಂದ ವಚನ ಪ್ರಸಾರಕ್ಕೆ ಸಹಕಾರಿಯಾಯಿತು. ಮುಂದುವರಿದ ಭಾಗವಾಗಿ ನಾವೆಲ್ಲರೂ ವಚನಗಳ ಸಾರವನ್ನು ಜನರ ಮನೆ-ಮನೆಗಳಿಗೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು ಎಂದು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಮ್ಮ ಉದಾಸಿ ಕರೆ ನೀಡಿದರು.ಭಾನುವಾರ ಇಲ್ಲಿನ ಶಂಕರ ಮಂಗಲ ಭವನದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶರಣ ತತ್ವಗಳನ್ನು ಆಚರಣೆಗೆ ತರುವುದು ಅತ್ಯಗತ್ಯವಾಗಿದೆ. ಇಂದಿನ ಯುವ ಪೀಳಿಗೆಗೆ ಶರಣರ ಸಂದೇಶಗಳ ಅರ್ಥವನ್ನು ತಿಳಿಸಿ ಅವರಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಮ್ಮ ಪಾತ್ರ ಪ್ರಮುಖವಾಗಿದೆ. ಶರಣರ ಸಂದೇಶಗಳು ಸಮಾಜದ ಹಿತಕ್ಕೆ ಮಾರ್ಗದರ್ಶಕವಾಗಿವೆ. ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ೧೨ನೇ ಶತಮಾನದ ಶರಣರ ಸಂದೇಶಗಳನ್ನು ಇಂದಿನ ಸಮಾಜಕ್ಕೆ ಮನವರಿಕೆ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಶಸಾಪ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ, ನಾಗಪ್ಪ ಸವದತ್ತಿ, ಮಾರುತಿ ಶಿಡ್ಲಾಪೂರ, ವಿಶ್ವನಾಥ ಹಿರೇಮಠ, ಎಚ್.ಎಚ್. ರವಿಕುಮಾರ, ರವಿಬಾಬು ಪೂಜಾರ, ಸಿದ್ದಲಿಂಗಪ್ಪ ಕಮಡೊಳ್ಳಿ, ದಾಕ್ಷಾಯಿಣಿ ಗಾಣಿಗೇರ, ಗುರುನಾಥ ಗವಾಣಿಕರ ಇತರರು ವೇದಿಕೆಯಲ್ಲಿದ್ದರು.