ಇಂದಿನಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

| Published : Apr 21 2025, 01:00 AM IST

ಸಾರಾಂಶ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಇದೇ ಏಪ್ರಿಲ್‌ 21ರಿಂದ 45 ದಿನಗಳ ಕಾಲ 7ನೇ ಸುತ್ತಿನ ಲಸಿಕಾ ಅಭಿಯಾನ ನಡೆಯಲಿದ್ದು ಈ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಇದೇ ಏಪ್ರಿಲ್, 21 ರಿಂದ 45 ದಿನಗಳ ಕಾಲ 7 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ಈ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಸಂಬಂಧ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಜಾನುವಾರುಗಳ ರಕ್ಷಣೆ ಸಂಬಂಧಿಸಿದಂತೆ ಎಲ್ಲರೂ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಶೇಕಡಾವಾರು ಯಶಸ್ಸಿಗೆ ಶ್ರಮಿಸುವಂತೆ ನಿರ್ದೇಶನ ನೀಡಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ.ಲಿಂಗರಾಜ ದೊಡ್ಡಮನಿ ಅವರು ಮಾತನಾಡಿ ಕಾಲುಬಾಯಿ ರೋಗವು ವೈರಾಣುನಿಂದ ಬರುವ ಅಂಟು ಜಾಡ್ಯವಾಗಿದ್ದು, ಲಸಿಕೆ ಹಾಕುವುದರಿಂದ ಕಾಲುಬಾಯಿ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದರು.

ವರ್ಷದಲ್ಲಿ ಕನಿಷ್ಠ ಎರಡು ಬಾರಿ ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಕರುಗಳಿಗೆ ತಪ್ಪದೇ ಒಮ್ಮೆ ಲಸಿಕೆ ಹಾಕಿಸಿದ ನಂತರ ಮತ್ತೊಮ್ಮೆ 3 ರಿಂದ 5 ವಾರದೊಳಗೆ ಬೂಸ್ಟರ್ ಲಸಿಕೆ ಹಾಕಿಸಬೇಕಿದೆ. ಹಾಗೆಯೇ ಗರ್ಭಧರಿಸಿದ ಹಸು ಮತ್ತು ಎಮ್ಮೆಗಳಿಗೂ ತಪ್ಪದೇ ಲಸಿಕೆ ಹಾಕಿಸಬೇಕಿದೆ ಎಂದು ಕೋರಿದರು.

ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದರೂ ಸಹ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಮನವಿ ಮಾಡಿದರು.

‘ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿರುತ್ತದೆ. 20 ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 75 ಲಸಿಕಾದಾರರನ್ನೊಳಗೊಂಡ ಲಸಿಕಾದಾರರು ರೈತರ/ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.

ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ/ ಎಮ್ಮೆ ಲಸಿಕೆ ಹಾಕಿಸುವಂತೆ ಕೋರಿದರು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಡಿಕೇರಿ 9448647276, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಸೋಮವಾರಪೇಟೆ 9980360200, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ವಿರಾಜಪೇಟೆ 9901303996, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಕುಶಾಲನಗರ 9448422269 ಹಾಗೂ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಪೊನ್ನಂಪೇಟೆ 9740556311 ನ್ನು ಸಂಪರ್ಕಿಸಬಹುದು ಎಂದು ಲಿಂಗರಾಜ ದೊಡ್ಡಮನಿ ಅವರು ವಿವರಿಸಿದರು.

ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ.ತಿಮ್ಮಯ್ಯ, ನೋಡಲ್ ಅಧಿಕಾರಿ ಡಾ.ಶಿಲ್ಪ, ತಾಲೂಕು ಪಶು ವೈದ್ಯಾಧಿಕಾರಿಗಳಾದ ಡಾ.ಪ್ರಸನ್ನ, ಡಾ.ರಾಜಶೇಖರ್, ಡಾ.ಗಿರೀಶ್, ಡಾ.ನವೀನ್, ಡಾ.ಶಿಂದೆ, ಸಂಚಾರಿ ಪಶುಚಿಕಿತ್ಸಾ ಘಟಕದ ಡಾ.ಶರತ್, ಹಾಸನ ಕೆಎಂಎಫ್ ಪ್ರಧಾನ ವ್ಯವಸ್ಥಾಪಕರಾದ ಡಾ.ರೂಪೇಶ್ ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭಿತ್ತಿಪತ್ರ ಬಿಡುಗಡೆ ಮಾಡಿದರು.

ಮತ್ತಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ 2025ರ ಏಪ್ರಿಲ್, 21 ರಿಂದ ಜೂನ್, 04 ರವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 07ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದನ, ಎಮ್ಮೆ, ಆಡು, ಕುರಿ, ಹಂದಿ, ಸೇರಿದಂತೆ ಎಲ್ಲಾ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ರೈತರಿಗೆ ಅಪಾರವಾದ ಆರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿದೆ.