ಉಡುಪಿ: ಕಥೋಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಘಟಕ ಹಾಗೂ ಸಂತ ಆನ್ನಮ್ಮ ಚರ್ಚ್ ಪರಿಸರ ಆಯೋಗದ ಸಂಯುಕ್ತ ಆಶ್ರಯದಲ್ಲಿ ‘ಲೌದಾತೋ ಸಿ ದಿನ’ ಹಾಗೂ ‘ವನಮಹೋತ್ಸವ - 2026’ನ್ನು ಚರ್ಚ್‌ನಲ್ಲಿ ಆಚರಿಸಲಾಯಿತು.
ಪವಿತ್ರ ಬಲಿಪೂಜೆಯ ಬಳಿಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ವಿಶೇಷ ವನಮಹೋತ್ಸವ ನಡೆಯಿತು. ಚರ್ಚಿನ ಧರ್ಮಗುರು ಫಾ. ಹೆನ್ರಿ ಮಸ್ಕರೇನ್ಹಸ್ ಅವರ ಮೂಲಕ ಕ್ಯಾಥೋಲಿಕ್ ಸಭಾ ತೊಟ್ಟಂ ಘಟಕವು 60 ಬಂಗನಪಳ್ಳಿ ಮಾವಿನ ಗಿಡಗಳನ್ನು ಖರೀದಿಸಿ, ಚರ್ಚಿನ 12 ವಾರ್ಡ್‌ಗಳ ಮುಖ್ಯಸ್ಥರಿಗೆ ತಲಾ ಐದು ಗಿಡಗಳಂತೆ ವಿತರಿಸಿ, ಪ್ರತಿ ವಾರ್ಡ್‌ನ ಐದು ಕುಟುಂಬಗಳಲ್ಲಿ ಈ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ರೂಪಿಸಲಾಯಿತು.ನಂತರ ಕ್ಯಾಥೋಲಿಕ್ ಸಭಾ ಹಾಗೂ ಚರ್ಚ್ ಪಾಲನಾ ಮಂಡಳಿಯ ಪದಾಧಿಕಾರಿಗಳು ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ, ಆಯ್ಕೆಗೊಂಡ ಕುಟುಂಬಗಳ ಮನೆಗಳಲ್ಲಿ ಸ್ವತಃ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಧರ್ಮಗುರು ಫಾ. ಹೆನ್ರಿ ಮಸ್ಕರೇನ್ಹಾಸ್ ತಮ್ಮ ಸಂದೇಶದಲ್ಲಿ ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರು ಸೃಷ್ಟಿಸಿದ ಪ್ರಕೃತಿಯನ್ನು ಪ್ರೀತಿಸಿ, ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಮರಗಳು ಶುದ್ಧ ಗಾಳಿ, ಹಣ್ಣು, ನೆರಳು ಹಾಗೂ ಪರಿಸರ ಸಮತೋಲನವನ್ನು ನೀಡುವುದರೊಂದಿಗೆ ಮಾನವನ ಬದುಕಿಗೆ ಅಮೂಲ್ಯ ಕೊಡುಗೆ ನೀಡುತ್ತವೆ ಎಂದು ಹೇಳಿದರು.ಇದು ಕೇವಲ ಒಂದು ವರ್ಷದ ಕಾರ್ಯಕ್ರಮವಲ್ಲದೆ, ಐದು ವರ್ಷಗಳ ವಿಶೇಷ ಪರಿಸರ ಸಂರಕ್ಷಣಾ ಯೋಜನೆಯಾಗಿದೆ. ಪ್ರತಿವರ್ಷ ಗಿಡಗಳ ಬೆಳವಣಿಗೆ ನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ, ಅತ್ಯುತ್ತಮವಾಗಿ ಗಿಡಗಳನ್ನು ಪೋಷಿಸಿದ ವಾರ್ಡ್‌ಗೆ ಬಹುಮಾನ ನೀಡಲಾಗುವುದು. ಇದೇ ಮಾದರಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಧರ್ಮಕೇಂದ್ರದ ಪ್ರತಿಯೊಂದು ಕುಟುಂಬಕ್ಕೂ ಗಿಡ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಲೆಸ್ಲಿ ಅರೋಜಾ, ಕ್ಯಾಥೋಲಿಕ್ ಸಭಾ ತೊಟ್ಟಂ ಘಟಕದ ಅಧ್ಯಕ್ಷ ರೋಬಿ ಗ್ಯಾಬ್ರಿಯೇಲ್ ಫೆರ್ನಾಂಡಿಸ್, ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 21 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್, ಪರಿಸರ ಆಯೋಗದ ಸಂಯೋಜಕ ಆರ್ಥರ್ ವಾಜ್, ವಾರ್ಡ್ ಮುಖ್ಯಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.