ವೈಭವ ತೊರೆದು ಸಮಾನತೆ ಸಾರಿದ ವೇಮನರು: ಸಂಸದ ಪಿ.ಸಿ.ಗದ್ದಿಗೌಡರ

| Published : Jan 20 2024, 02:05 AM IST

ಸಾರಾಂಶ

ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಪಾಲ್ಗೊಂಡು ಮಾತನಾಡಿದರು. ಜತೆಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿರಿವಂತಿಕೆ ವೈಭವದ ಜೀವನ ತೊರೆದು ಮೇಲು-ಕೀಳು ಬದಿಗಿರಿಸಿ ಸಮಾನತೆ ಸಾರಿದ ಸಂತ ಮಹಾಯೋಗಿ ವೇಮನರು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ನವನಗರದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವೇಮನ ತನ್ನ ಜೀವನದಲ್ಲಾದ ಘಟನಗಳನ್ನೇ ಆಡು ಭಾಷೆಯಲ್ಲಿ ರಚಿಸಿ ತೆಲುಗು ಸಾಹಿತ್ಯ ಶ್ರೀಮಂತಗೊಳಿಸಿದರು. ತೆಲುಗಿನ ತ್ರಿಪದಿ ಕವಿ ವೇಮನನಾದರೆ, ಕನ್ನಡದ ತ್ರಿಪದಿ ಕವಿ ಸರ್ವಜ್ಞನಾಗಿದ್ದು, ತಮಿಳಿನ ತಿರುವಳ್ಳರ್‌ ತಮಿಳು ಭಾಷೆ ತ್ರಿಪದಿ ಕವಿಯಾಗಿದ್ದಾರೆ. ಈ ಮೂವರು ಭಾಷೆ ಬೇರೆಯಾದರೂ ಲೋಕಕಲ್ಯಾಣಕ್ಕಾಗಿ ಮಾನವ ಜೀವಿಗಳೆಲ್ಲ ಒಂದೇ ಎಂಬ ಸಂದೇಶವನ್ನು ಜನತೆಗೆ ತಿಳಿಸಿದವರು. ವೇಮನ ಜಯಂತಿ ಉತ್ಸವ ಆಚರಿಸಿದರೆ ಸಾಲದು. ಅವರ ಜೀವನದ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಆಚರಣೆಗೆ ಸಾರ್ಥಕವೆಂದ ಅವರು, ನವನಗರ ಹಾಗೂ ಶೀರೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನಕ್ಕೆ ತಲಾ ₹ 5 ಲಕ್ಷ ನೀಡುವುದಾಗಿ ಪಿ.ಸಿ.ಗದ್ದಿಗೌಡರ ಭರವಸೆ ನೀಡಿದರು.

ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಲಕ್ಷ್ಮೇಶ್ವರ ತಾಲೂಕು ಮಾಜಿ ಅಧ್ಯಕ್ಷೆ ಹಾಗೂ ಶಿಕ್ಷಕಿ ಡಾ.ಜಯಶ್ರೀ ಹೊಸಮನಿ ಮಾತನಾಡಿ, ಭಾರತದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಸಿ.ಪಿ. ಬ್ರೌನ್ ಎಂಬ ಅಧಿಕಾರಿ ವೇಮನರ ಎಲ್ಲ ವಚನಗಳನ್ನು ಕ್ರೋಡೀಕರಿಸಿದ್ದರಿಂದ ಇಂದು ನಾವೆಲ್ಲ ಆ ವಚನಗಳನ್ನು 18 ಭಾಷೆಗಳಲ್ಲಿ ನೋಡುವಂತಾಗಿದೆ. ತುಪ್ಪವಿಲ್ಲದ ಊಟ, ಸಾರು ಇಲ್ಲದ ನೋಟ ಸ್ವಾನವೂ ಮೂಶಿಸಲಾರದು ಕೇಳಾವೇವ ಪಟ್ಟಾಭಿರಾಮ ಎಂಬ ವಚನದಲ್ಲಿ ಜೀವನಶೈಲಿಯನ್ನು ಸಹ ತಿಳಿಸಿಕೊಟ್ಟಿದ್ದಾರೆ. ವೇವನರ ವಚನಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ಮಹಾಮಾತೆ ಮಲ್ಲಮ್ಮಳ ಆಶೀರ್ವಾದದಿಂದ ಕೃಪಾಶೀರ್ವಾದ ಪಡೆದು, ಭೋಗಿಯಾಗಿ, ತ್ಯಾಗಿಯಾಗಿ ಮಹಾಯೋಗಿಯಾದವರು ವೇಮನ ಎಂದ ಅವರು, ನವನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನಕ್ಕೆ ₹ 20 ಲಕ್ಷ ಅನುದಾನ ನೀಡುವುದಾಗಿ ತಿಳಿಸಿ ಸದ್ಯ ₹ 10 ಲಕ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಮುದಾಯದ ಮುಖಂಡರಾದ ಮಹೇಶ ಕಕರಡ್ಡಿ, ಡಾ.ಜಿ.ಆರ್. ಹಲಗಲಿ, ಶಿವಣ್ಣ ಮಾಚಾ, ಎಸ್.ಎಸ್ . ನಾಲತ್ವಾಡ, ನಾರಾಯಣ ಹಾದಿಮನಿ, ಕುಮಾರ ಹುಲಕುಂದ, ಈಶ್ವರ ಕೋಣಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

------

ಭಾವಚಿತ್ರದ ಅದ್ದೂರಿ ಮೆರವಣಿಗೆ

ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಸಂಸದ ಪಿ.ಸಿ. ಗದ್ದಿಗೌಡರ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅಂಬೇಡ್ಕರ್‌ ಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಅಲಂಕೃತಗೊಂಡ ಕೃಷಿ ಪರಿಕರವಾದ ಕೂರಿಗೆಯನ್ನು ಹಿಡಿದು ಬಿತ್ತುವ ಚಿತ್ರಣವನ್ನು ಮಾದರಿಯಾಗಿ ತೋರಿಸಿದ್ದು, ಎಲ್ಲರ ಗಮನ ಸೆಳೆಯಿತು. ಮಹಿಳೆಯರು ಪೂರ್ಣಕುಂಭ ಹೊತ್ತುಕೊಂಡು ಪಾಲ್ಗೊಂಡಿರುವುದು ಆಕರ್ಷಣೀಯವಾಗಿತ್ತು.