ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ವೈಮಾನಿಕ ಕ್ಷೇತ್ರದ ನಕಾಶೆಯಲ್ಲಿ ಕರ್ನಾಟಕ ಪ್ರಮುಖ ಕೇಂದ್ರವಾಗಿ ಹೊರ ಹೊಮ್ಮುತ್ತಿರುವುದಕ್ಕೆ ವಿಮಾನ ಉತ್ಪಾದಕ ದೈತ್ಯ ಕಂಪನಿ ಬೋಯಿಂಗ್‌ನ ಅತಿ ದೊಡ್ಡ ಕ್ಯಾಂಪಸ್ ಕಾರ್ಯಾರಂಭ ಮಾಡಿರುವುದು ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರ ಹೊರವಲಯದ ಏರೋಸ್ಪೇಸ್ ಪಾರ್ಕ್‌ನಲ್ಲಿ ನೂತನವಾಗಿ ತಲೆ ಎತ್ತಿರುವ ‘ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್’ (ಬಿಐಇಟಿಸಿ) ಅನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 43 ಎಕರೆ ಪ್ರದೇಶದಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕ್ಯಾಂಪಸ್, ಅಮೆರಿಕದ ಹೊರಗೆ ಕಂಪನಿ ಮಾಡಿರುವ ಅತಿ ದೊಡ್ಡ ಹೂಡಿಕೆಯಾಗಿದೆ.
ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅವಿಷ್ಕಾರ ಬೇಡಿಕೆಗಳನ್ನು ಪೂರೈಸಲು ಭಾರತ ಸರ್ವ ಸನ್ನದ್ಧವಾಗಿದೆ. ಭಾರತದಲ್ಲಿನ ಪ್ರತಿಭೆಯ ಬಗ್ಗೆ ವಿಶ್ವಾಸವನ್ನು ಹೊಂದಿರುವುದಕ್ಕೆ ಈ ಕ್ಯಾಂಪಸ್ ಸಾಕ್ಷಿಯಾಗಿದೆ. ಮುಂದೊಂದು ದಿನ ಭಾರತವು ಈ ಕ್ಯಾಂಪಸ್‌ನಲ್ಲಿ ವಿಮಾನದ ವಿನ್ಯಾಸ ಮತ್ತು ಉತ್ಪಾದನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ತುಮಕೂರಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಬೆಂಗಳೂರಿನಲ್ಲಿ ಬೋಯಿಂಗ್ ವಿಮಾನ ಸಂಶೋಧನಾ ಘಟಕ ಸ್ಥಾಪನೆ ನೋಡಿದರೆ ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕವು ಹೊಸ ವೈಮಾನಿಕ ಕೇಂದ್ರವಾಗಿ ಹೊರ ಹೊಮ್ಮುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಅಪಾರ ಸಂಖ್ಯೆಯ ಅವಕಾಶಗಳು ಇರುವ ಕಾರಣ ವೈಮಾನಿಕ ಕ್ಷೇತ್ರದ ಕೌಶಲ್ಯಗಳನ್ನು ಯುವ ಜನತೆ ಹೊಂದಬೇಕು ಎಂದು ಪ್ರಧಾನಿ ಕರೆ ನೀಡಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸರ್ಕಾರ ಒತ್ತು ನೀಡುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ಬದ್ಧವಾಗಿದ್ದೇವೆ. ಫೈಟರ್ ವಿಮಾನ ಮತ್ತು ನಾಗರಿಕ ವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಭಾರತದಲ್ಲೇ ಹೆಚ್ಚು ಇದೆ.
ಭಾರತದ ಪೈಲಟ್‌ಗಳ ಪೈಕಿ ಶೇ.15ರಷ್ಟು ಮಹಿಳೆಯರಿದ್ದಾರೆ. ಇದು ಜಾಗತಿಕ ಸರಾಸರಿಗಿಂತ 3 ಪಟ್ಟು ಹೆಚ್ಚು ಇದೆ. ಸುಕನ್ಯಾ ಯೋಜನೆಯಿಂದ ಹೆಣ್ಣು ಮಕ್ಕಳು ವೈಮಾನಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಗಲಿದೆ.
ಹೆಣ್ಣು ಮಕ್ಕಳಿಗೆ ವೃತ್ತಿಪರ ತರಬೇತಿ ನೀಡಲು ಮತ್ತು ಪೈಲಟ್‌ಗಳಾಗಲು ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
2014ರಲ್ಲಿ 70 ಸಕ್ರಿಯ ವಿಮಾನ ನಿಲ್ದಾಣಗಳಿದ್ದವು. ಇಂದು ಆ ಸಂಖ್ಯೆ 150ಕ್ಕೆ ಏರಿದೆ. ವಿಮಾನ ನಿಲ್ದಾಣ ಮೂಲಸೌಕರ್ಯಗಳನ್ನು ಗಣನೀಯವಾಗಿ ಸುಧಾರಿಸಲಾಗಿದೆ.
ಏರ್ ಕಾರ್ಗೋ ಸಾಮರ್ಥ್ಯ ಹೆಚ್ಚಳವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಗ್ರಾಮಾಂತರ ಪ್ರದೇಶಗಳ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ತಲುಪುತ್ತಿವೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ತಂತ್ರಜ್ಞಾನದ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತಿದೆ. ಕರ್ನಾಟಕ ವಿಶ್ವದಲ್ಲಿಯೇ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದೆ.
ಭಾರತದ ನಾವಿನ್ಯತಾ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ದೇಶದ ಒಟ್ಟಾರೆ ರಫ್ತಿನಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಪ್ರತಿಭಾನ್ವಿತ ಉದ್ಯೋಗಿಗಳು ಹಾಗೂ ಕೌಶಲಯುಕ್ತ ಮಾನವ ಸಂಪನ್ಮೂಲ ಹೇರಳವಾಗಿರುವ ಕರ್ನಾಟಕವು ಸಹಜವಾಗಿಯೇ ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆಯಾಗಿದೆ. ಬೋಯಿಂಗ್ ಇಂಡಿಯಾದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಆವರಣದ ಈ ಉದ್ಘಾಟನಾ ಸಮಾರಂಭವು ಜಾಗತಿಕ ಮಟ್ಟದಲ್ಲಿ ವಿಮಾನಯಾನ ವಲಯದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವ ಆಶಯಕ್ಕೆ ಪುಷ್ಟಿ ನೀಡುವಂತಿದೆ ಎಂದು ಮುಖ್ಯಮಂತ್ರಿ ನುಡಿದರು.