ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನಕ್ಕೆ ಸಂಬಂಧಿಸಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಸಿ ಆಣೆ ಪ್ರಮಾಣದ ಮಾತನಾಡಿದ್ದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಶುಕ್ರವಾರ ಉಳಿದ ನಾಯಕರನ್ನು ಬಿಟ್ಟು ಕೇವಲ ಕರಾವಳಿಯ ಪಕ್ಷ ಮುಖಂಡರು, ಸಂಸದ ಹಾಗೂ ಶಾಸಕರೊಂದಿಗೆ ಏಕಾಂಗಿಯಾಗಿ (ಇತರೆ ನಾಯಕರ ಹೊರತುಪಡಿಸಿ) ಧರ್ಮಸ್ಥಳಕ್ಕೆ ಭೇಟಿ ನೀಡಿ ವಿವಾದಕ್ಕೆ ಇತಿಶ್ರೀ ಹಾಕುವ ಪ್ರಯತ್ನ ನಡೆಸಿದರು.
ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ, ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವಿಜಯೇಂದ್ರ ದೆಹಲಿಯಲ್ಲಿ ತೆರಳಿದ್ದರು. ಅಲ್ಲಿ ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ ಬಳಿಕ ವಿಜಯೇಂದ್ರ ಗುರುವಾರ ನೇರವಾಗಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ತಡರಾತ್ರಿ ಧರ್ಮಸ್ಥಳ ತಲುಪಿದ್ದರು. ಇಲ್ಲಿನ ಸನ್ನಿಧಿ ಗೆಸ್ಟ್‌ಹೌಸ್‌ನಲ್ಲಿ ತಂಗಿ ಮರುದಿನ ಶುಕ್ರವಾರ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು.ಕಾಣಿಕೆ ಸಮರ್ಪಣೆ:
ಕರಾವಳಿಯ ಪಕ್ಷ ಮುಖಂಡರು, ಸಂಸದರು ಹಾಗೂ ಶಾಸಕರೊಂದಿಗೆ ನೇರವಾಗಿ ಶ್ರೀದೇವರ ದರ್ಶನಕ್ಕೆ ತೆರಳಿದರು. ವಿಶೇಷ ಪೂಜೆ ಸೇವೆ ಮಾಡಿದ ಸಂದರ್ಭ ಆಣೆ ಪ್ರಮಾಣದ ಮಾತಿಗೆ ಇತಿಶ್ರೀ ಸಲುವಾಗಿ 1,001 ರು. ಕಾಣಿಕೆ ಅರ್ಪಿಸಿದರು. ನಂತರ ಧರ್ಮಾಧಿಕಾರಿಗಳ ವಾಸಸ್ಥಾನ ಬೀಡಿಗೆ ತೆರಳಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.ಈ ವೇಳೆ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಭಾಗೀರಥಿ, ಹರೀಶ್ ಪೂಂಜಾ, ಉಡುಪಿ ಜಿಲ್ಲೆಯ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ರಾಜ್ಯ ಪ್ರಚಾರ ವಿಭಾಗದ ಪ್ರಶಾಂತ್ ಕೆಡೆಂಜಿ, ದ.ಕ. ಜಿಲ್ಲಾ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಸಾಥ್ ನೀಡಿದರು.
ಡಾ.ವೀರೇಂದ್ರ ಹೆಗ್ಗಡೆ ಜೊತೆ ಕುಶಲೋಪರಿ ನಡೆಸಿದ ಬಳಿಕ ವಿಜಯೇಂದ್ರ ಅವರು ಸನ್ನಿಧಿ ಗೆಸ್ಟ್‌ಹೌಸ್‌ಗೆ ತೆರಳಿ ಸುದ್ದಿಗೋಷ್ಠಿ ನಡೆಸಿದರು. ಅಡ್ಡ ಮತ ಶಾಸಕರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ: ಅಡ್ಡ ಮತದಾನದಿಂದ ಶಾಸಕರನ್ನು ಕಾರ್ಯಕರ್ತರು ಅನುಮಾನದಿಂದ ನೋಡುವಂತಾಗಿದೆ. ಇದರಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಪರಿಷತ್ ಚುನಾವಣೆ ಫಲಿತಾಂಶದ ಮಾರನೇ ದಿನವೇ ನನ್ನ ಮನಸ್ಸು ಘಾಸಿಗೊಂಡಿತ್ತು. ನಾನು ಭಾವನಾತ್ಮಕ ವ್ಯಕ್ತಿ, ಸತ್ಯ ತಿಳಿಯುವುದಕ್ಕಾಗಿಯೇ ನಾನು ಧರ್ಮಸ್ಥಳದಲ್ಲಿ ಶಾಸಕಾಂಗದ ಸಭೆ ನಡೆಸುತ್ತೇನೆ ಎಂದಿದ್ದೆ. ಆದರೆ ಪಕ್ಷದ ನಾಯಕರು, ಹಾಗೆ ಮಾಡುವುದು ಬೇಡ ಎಂದು ಕಿವಿ ಮಾತು ಹೇಳಿದರು. ನಾನು ಈ ಕ್ಷೇತ್ರದ ಪರಮಭಕ್ತನಾಗಿದ್ದು, ಅಂತಹವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದರು.ಹಿಂದು ರಕ್ಷಕ ಸರ್ಕಾರ ಆಡಳಿತಕ್ಕೆ ಬರಲಿ: ಯಾವಾಗ ಅಸೆಂಬ್ಲಿ ಚುನಾವಣೆ ಬಂದರೂ ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರ ಅಧಿಕಾರಕ್ಕೆ ಬರಲಿ, ಹಿಂದು ರಕ್ಷಕ ಸರ್ಕಾರ ಆಡಳಿತ ನಡೆಸಲಿ. ಈ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಇದಲ್ಲದೆ ರಾಜ್ಯದಲ್ಲಿ ಬರಗಾಲ ವ್ಯಾಪಿಸಿದ್ದು, ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದಾಗಿ ವಿಜಯೇಂದ್ರ ಹೇಳಿದರು.