ಸಾರಾಂಶ
-30 ಗ್ರಾಮಗಳಿಗೆ ಅನುಕೂಲ -ಹಳೆಯ ಪ್ಲಾನ್ ರೀತಿಯಲ್ಲೇ ಕೆಲಸ ಮಾಡಲು ಗ್ರಾಮಸ್ಥರ ಒತ್ತಾಯ
-6 ಕಿಲೋಮೀಟರ್ ಉಳಿತಾಯಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಕೊಳತೂರು ಗೇಟ್ ಬಳಿ ಹಾದು ಹೋಗಿರುವ ಚೆನ್ನೈ ಎಕ್ಸ್ಪ್ರೆಸ್ ಹೈವೇ ಜಂಕ್ಷನ್ ಬಳಿ ಕೊಳತೂರು ಗ್ರಾಮಕ್ಕೆ ತೆರಳಲು ಮೇಲ್ಸೇತುವೆ ನಿರ್ಮಿಸಿ ಅಂಡರ್ ಪಾಸ್ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.೨೦೧೬ರಲ್ಲಿ ರಸ್ತೆ ನಿರ್ಮಾಣದ ವೇಳೆ ಭೂಮಿ ಪಡೆದುಕೊಂಡು ಹಣ ಕೊಟ್ಟು ರಸ್ತೆ ನಿರ್ಮಾಣದ ಯೋಜನೆ ಸಿದ್ದಪಡಿಸಿದ್ದರು. ಆ ಯೋಜನೆ ಪ್ರಕಾರ ಕೊಳತೂರು ಗ್ರಾಮಕ್ಕೆ ತೆರಳಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈಗ ಆ ಯೋಜನೆಯನ್ನು ಆಧಿಕಾರಿಗಳು ತಿರುಚಿದ್ದು ಕೊಳತೂರು ಗೇಟ್ ಬಳಿ ತಿರುವು ಪಡೆಯುವ ರಸ್ತೆ ಮುಚ್ಚುವ ಹಾಗೆ ಹಾಗೂ ಕೊಳತೂರು ಗ್ರಾಮಕ್ಕೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ೭೫ರ ಹಲಸಹಳ್ಳಿ ಗೇಟ್ ಬಳಿಗೆ ಯು ತಿರುವು ಪಡೆದು ವಾಪಸ್ ಬಂದು ಕೊಳತೂರು ಗ್ರಾಮಕ್ಕೆ ಪ್ರವೇಶ ಮಾಡುವಂತೆ ಪ್ಲಾನ್ ಮಾಡಿದ್ದಾರೆ. ಆದ್ದರಿಂದ ಈ ಯೋಜನೆ ಕೈ ಬಿಟ್ಟು 2016ರಲ್ಲಿ ಮಾಡಿದ ಯೋಜನೆಯಂತೆ ರಸ್ತೆ ನಿರ್ಮಾಣ ಮಾಡಿ ಹತ್ತಾರು ಗ್ರಾಮದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡ ಬಸವರಾಜ್ ಒತ್ತಾಯಿಸಿದರು.
ತಾಪಂ ಮಾಜಿ ಅಧ್ಯಕ್ಷ ವಿಸಿ ಜಯದೇವಯ್ಯ ಮಾತನಾಡಿ, ಕೊಳತೂರು ಗೇಟ್ ಬಳಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಿಂದ ಕೊಳತೂರು ಗೇಟ್ ಮೂಲಕ ೩೦ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಾವಿರಾರು ಜನರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಜನರ ವಿರೋಧ ಮಾಡಿ ರಸ್ತೆ ನಿರ್ಮಿಸಲು ಮುಂದಾದರೆ ರಸ್ತೆ ತಡೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.ಗ್ರಾಮ ಮುಖಂಡರಾದ ಲಕ್ಷ್ಮಣಮೂರ್ತಿ, ರಮೇಶ್, ಬಸವರಾಜು.ಎಂ, ಮುನಿರಾಜು, ಕೆ.ಎಚ್.ಸುರೇಶ್, ರವಿ, ಓರೋಹಳ್ಳಿ ಜಯಣ್ಣ, ಸೋಲೂರು ಮುನಿಯಪ್ಪ, ಮುನೇಗೌಡ, ಅಶ್ವಥ್, ಬೈರೇಗೌಡ, ಭಾಸ್ಕರ್, ಪಟೇಲ್ ಶ್ರೀನಿವಾಸ್, ಶ್ರೀನಿವಾಸ್, ಶುಬ್ರಾಯಪ್ಪ, ಪ್ರವೀಣ್, ಸುನಿಲ್ ಹಾಜರಿದ್ದರು.
ತಾಯಿ ಮಕ್ಕಳ ಆಸ್ಪತ್ರೆಗೂ ತೊಂದರೆ
ಈಗಾಗಲೇ ಕೊಳತೂರು ಬಳಿ ನೂರು ಹಾಸಿಗೆಗಳ ತಾಯಿ ಮಗು ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, ಅಲ್ಲೇ ಖಾಲಿ ಇರುವ ಜಾಗದಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಸ್ಥಳ ಪರಿಶೀಲಿಸಿದ್ದಾರೆ. ಈ ಆಸ್ಪತ್ರೆಗಳು ಪ್ರಾರಂಭವಾದ ಮೇಲೆ ಆಸ್ಪತ್ರೆಗೆ ತೆರಳುವ ರೋಗಿಗಳಿಗೂ ರಸ್ತೆ ಸಮಸ್ಯೆಯಾಗಲಿದೆ. ಆದ್ದರಿಂದ ಮೇಲ್ಸೇತುವೆ ನಿರ್ಮಿಸಿ ಅಂಡರ್ ಪಾಸ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮ ಮುಖಂಡ ಲಕ್ಷ್ಮಣಮೂರ್ತಿ ಒತ್ತಾಯಿಸಿದರು.17ಕ್ಕೆ ಸಂಸದರ ಭೇಟಿ
ಕೊಳತೂರು ಗ್ರಾಮದ ನಾಗರಿಕರ ಸಮಸ್ಯೆ ಆಲಿಸುವ ವಿಚಾರವಾಗಿ ಸಂಸದ ಡಾ. ಕೆ.ಸುಧಾಕರ್ ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಅಂತಿಮವಾಗಿ ಸಂಸದರ ಪ್ರವಾಸ ರದ್ದಾದರಿಂದ ಸೆ. 17ಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸಿ ರಸ್ತೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಸ್ಥಳದಲ್ಲಿ ಜಮಾಯಿಸಿದ್ದ ನಾಗರಿಕರು ವಾಪಸ್ ತೆರಳಿದರು.