ಸಾರಾಂಶ
ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಜೆರೋಮ್ ಡಿಸೋಜ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ವಾಮಂಜೂರು ಗ್ರಾಮಾಂತರ ಪೊಲೀಸ್ ಠಾಣೆ, ಪೊಲೀಸ್ ಕಮಿಷನರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಅಧ್ಯಕ್ಷ ಪೌಲ್ ರಾಲ್ಫಿ ಡಿಕೋಸ್ಟ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೊರವಲಯದ ಪಾವೂರು ಉಳಿಯ ದ್ವೀಪದ ಸುತ್ತ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಜೆರೋಮ್ ಡಿಸೋಜ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ವಾಮಂಜೂರು ಗ್ರಾಮಾಂತರ ಪೊಲೀಸ್ ಠಾಣೆ, ಪೊಲೀಸ್ ಕಮಿಷನರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಅಧ್ಯಕ್ಷ ಪೌಲ್ ರಾಲ್ಫಿ ಡಿಕೋಸ್ಟ ಎಚ್ಚರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ಮಾಫಿಯಾದಿಂದ ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62ನೇ ತೋಕೂರು ಕೆಂಜಾರು ಪ್ರದೇಶಗಳ ದ್ವೀಪಗಳನ್ನು ಉಳಿಸುವಂತೆ ಸೆ.27ರಂದು ಪ್ರತಿಭಟನೆ ನಡೆಸಿದ್ದೆವು. ಅ.5ರಂದು ಪತ್ರಕರ್ತೆಯೊಬ್ಬರ ಜತೆ ಆಲ್ವಿನ್ ಜೆರೋಮ್ ಸ್ಥಳಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ. ಆದರೆ ಕೇವಲ ಒಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿಲ್ಲ. ಬೆದರಿಕೆ ಹಾಕಿದ ಇತರ ಐದು ಮಂದಿ ವಿರುದ್ಧವೂ ಕೇಸು ದಾಖಲಿಸಬೇಕು. ಶಾಶ್ವತವಾಗಿ ಮರಳುಗಾರಿಕೆ ಸ್ಥಗಿತಗೊಳಿಸಿ, ದ್ವೀಪಗಳನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ರಾತ್ರಿ- ಹಗಲು ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ, ಸರ್ಕಾರ, ಶಾಸಕರು ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಉಪಾಧ್ಯಕ್ಷ ಸ್ಟೀವನ್ ರೋಡ್ರಿಗಸ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಮೊಂತೇರೊ, ಆಧ್ಯಾತ್ಮಕ ನಿರ್ದೇಶಕ ಫಾ.ಜೆ.ಬಿ. ಕ್ರಾಸ್ತ, ಸ್ಥಳೀಯ ನಿವಾಸಿ ಗಿಲ್ಬರ್ಟ್ ಡಿಸೋಜ, ಮಾಜಿ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಇದ್ದರು.