ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಲೋಕಸಭೆ ಚುನಾವಣೆಗೆ ಏಪ್ರಿಲ್ 26ರಂದು ಮತದಾನಕ್ಕೆ ದಿನಾಂಕ ಫಿಕ್ಸ್ ಆಗಿದ್ದರೂ ವೃದ್ದರು ಮಾತ್ರ 12 ದಿನಗಳ ಮುಂಚೆಯೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತಗಟ್ಟೆಗೆ ಬರಲು ಸಾಧ್ಯವಾಗದ 85 ವರ್ಷ ಮೇಲ್ಟಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಹಾಗಾಗಿ ಏಪ್ರಿಲ್ 13 ರಿಂದ 16 ವರೆಗೆ ಮನೆಯಿಂದಲೇ ಮತದಾನ ನಡೆಯಲಿದೆ. ಶನಿವಾರ ಚಿತ್ರದುರ್ಗದಲ್ಲಿ ಚುನಾವಣಾ ಸಿಬ್ಬಂದಿ ಅಂಗವಿಕಲರು ಮತ್ತು ವೃದ್ದರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.ಮನೆಯಿಂದಲೇ ಮತ ಚಲಾಯಿಸಲು 2722 ಮಂದಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 1526 ಮಂದಿ ಅಂಗವಿಕಲರು ಸೇರಿದಂತೆ 4248 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಯಿಂದ ಬ್ಯಾಲೆಟ್ ಪೇಪರ್,ಮತ ಚಲಾವಣೆ ಪರಿಕರ ಹಾಗೂ ಮತಪೆಟ್ಟಿಗೆಗಳನ್ನು ಕೈಲಿಡಿದು ಹೊರಟ ಚುನಾವಣಾ ಸಿಬ್ಬಂದಿ ನೋಂದಾಯಿಸಿದ ಮತದಾರರ ಮನೆಗಳ ಹುಡುಕಿಕೊಂಡು ಹೋಗಿ ಹಕ್ಕುಗಳ ಚಲಾಯಿಸಲು ಅವಕಾಶ ಮಾಡಿಕೊಟ್ಟರು. ಇದಕ್ಕಾಗಿ ಒಟ್ಟು 95 ತಂಡ ರಚನೆ ಮಾಡಲಾಗಿದೆ. ಪೊಲೀಸ್ ವಾಹನದೊಟ್ಟಿಗೆ ಮತದಾರರ ಮನೆ ಬಾಗಿಲಿಗೆ ತೆರಳಿದ ತಂಡದಲ್ಲಿ ಓರ್ವ ಪೊಲೀಸ್ ಪೇದೆ, ವಿಡಿಯೋ ಗ್ರಾಫರ್, ಪಿಆರ್‌ಓ, ಎಪಿಆರ್ ಓ, ಮೈಕ್ರೋ ಅಬ್ಸರ್ವರ್, ಬಿಎಲ್ಓ, ಸೆಕ್ಷನ್ ಆಫೀಸರ್‌ಗಳಿದ್ದರು.ಕನಿಷ್ಟ 20 ನಿಮಿಷ ಬೇಕು: ಮನೆಯಿಂದಲೇ ಮತದಾನದ ಪ್ರಕ್ರಿಯೆ ತೀರಾ ಸರಳವಾಗಿಲ್ಲ. ಪ್ರತಿ ಮತದಾರ ತನ್ನ ಮತ ಚಲಾಯಿಸಲು ಕನಿಷ್ಟ 20 ನಿಮಿಷದಷ್ಟು ಕಾಲಾವಕಾಶ ಬೇಕಾಗುತ್ತದೆ. ಮತದಾರರ ಮನೆ ಹೊಕ್ಕುವ ಪಿಆರ್ ಓ ಮೊದಲು ಡಿಕ್ಲರೇಷನ್ ಫಾರಂ ಭರ್ತಿ ಮಾಡಿ ಮತದಾರರ ಮಾಹಿತಿ ನಮೂದು ಮಾಡುತ್ತಾರೆ. ಮತದಾರರ ಗುರುತಿಸಿದ ಅಧಿಕಾರಿ ಹೆಸರು, ಮತ ಚಲಾವಣೆ ಮುನ್ನ ಮತದಾರ ಹಾಜರು ಪಡಿಸಿದ ದಾಖಲಾತಿ (ಎಪಿಕ್ ಕಾರ್ಡ್ ಇಲ್ಲವೇ ಆಧಾರ್ ಕಾರ್ಡ್) ಸಂಖ್ಯೆ ಒಳಗೊಂಡ ಈ 13ಎ ಡಿಕ್ಲರೇಷನ್ ಫಾರಂ ಭರ್ತಿ ಮಾಡಿದ ನಂತರ ಮತದಾರರಿಗೆ ಬ್ಯಾಲೆಟ್ ಪೇಪರ್ ನೀಡಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ವೇಳೆ ಗುಪ್ತ ಮತದಾನಕ್ಕಾಗಿ ಕಂಪಾರ್ಟ್ ಮೆಂಟ್ ಕೂಡ ಸೃಷ್ಠಿಸುತ್ತಾರೆ. ಮತ ಚಲಾಯಿಸಿ ಮಡಚಿದ ಬ್ಯಾಲೆಟ್ ಪೇಪರನ್ನು 13 ಬಿ ಕವರ್ ನಲ್ಲಿ ಇಡುತ್ತಾರೆ. ನಂತರ ಡಿಕ್ಲರೇಷನ್ ಮತ್ತು ಬ್ಯಾಲೆಟ್ ಕವರನ್ನು ಮತ್ತೊಂದು 13 ಸಿ ಕವರ್ ನಲ್ಲಿಟ್ಟು ಮತ ಪೆಟ್ಟಿಗೆಗೆ ಹಾಕಿದಾಗ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಭ್ಯರ್ಥಿಯ ಹೆಸರು ಇಲ್ಲವೇ ಅವರಿಗೆ ನೀಡಲಾದ ಚಿಹ್ನೆ ಮುಂದೆ ಪೆನ್ನಿನ ಸಹಾಯದಿಂದ ‘ x ಅಥವಾ ✅ ’ ಹಾಕಿ ಮತ ಚಲಾಯಿಸಬೇಕು.
ಮತ ಹಾಕುವುದನ್ನು ಹೊರತುಪಡಿಸಿ ಉಳಿದ ಪ್ರತಿಯೊಂದನ್ನುವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ. ಅಧಿಕಾರಿಗಳ ಮೇಲೆ ವಿಪರೀತ ಜವಾಬ್ದಾರಿ ಹೊರಿಸಲಾಗಿದ್ದು, ಡಿಕ್ಲರೇಷನ್ ನಲ್ಲಿರುವ ಅಂಶಗಳ ಚಾಚೂ ತಪ್ಪದೆ ಗಣನೆಗೆ ತೆಗೆದುಕೊಂಡು ಭರ್ತಿ ಮಾಡಬೇಕಾಗಿದೆ.ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯ ಮತಗಟ್ಟೆ ಸಂಖ್ಯೆ 194ರ ಸರಸ್ವತಮ್ಮ ಚಿತ್ರದುರ್ಗದ ಮೊದಲ ಮಹಿಳೆಯಾಗಿ ಮತ ಚಲಾಯಿಸಿದರು. ಮತದಾನ ಮಾಡಿಸುವ ತಂಡ ಅವರ ನಿವಾಸಕ್ಕೆ ಹೋದಾಗ ವೃದ್ಧೆ ಸ್ನಾನಕ್ಕೆ ತೆರಳಿದ್ದರಿಂದ ಸಿಬ್ಬಂದಿ ಅನಿವಾರ್ಯವಾಗಿ ಅರ್ಧ ತಾಸು ಕಾಯಬೇಕಾಯಿತು.1295 ಹಿರಿಯ ನಾಗರಿಕರು, ವಿಶೇಷ ಚೇತನರಿಂದ ಮತ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 803 ನಾಗರಿಕರು ಮತ್ತು 492 ವಿಶೇಷ ಚೇತನರು ಸೇರಿ ಒಟ್ಟು 1295 ಮತದಾರರು ಶನಿವಾರ ಮನೆಯಿಂದ ಮತ ಚಲಾಯಿಸಿದರು. ಮೊದಲ ದಿನವೇ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 132 ಹಿರಿಯ ನಾಗರಿಕರು ಮತ್ತು 51 ಜನ ವಿಶೇಷ ಚೇತನರು ಮತ ಚಲಾಯಿಸಿದರು. ಇದೇ ಮಾದರಿಯಲ್ಲಿ ಅನುಕ್ರಮವಾಗಿ, ಹಿರಿಯೂರು ಕ್ಷೇತ್ರ ವ್ಯಾಪ್ತಿಯಲ್ಲಿ 91 ಮತ್ತು 64, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 84 ಮತ್ತು 81, ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 190 ಹಾಗೂ 189, ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 144 ಮತ್ತು 42, ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 162 ಮತ್ತು 65 ಜನರು ಮತ ಚಲಾಯಿಸಿದ್ದಾರೆ.