ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಗರದ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಭಾಂಗಣದಲ್ಲಿ ಶನಿವಾರ ನಡೆಯಿತು.ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಅಡಗೂರು ವಿಶ್ವನಾಥ್, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಈ ಸಂದರ್ಭ ಸಭೆಯಲ್ಲಿ ಅಡಗೂರು ವಿಶ್ವನಾಥ್ ಮಾತನಾಡಿ, ಜಿಲ್ಲೆಯ ಬಿಜೆಪಿ ನಾಯಕರು ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯಲ್ಲಿ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರಲ್ಲದೇ, ಪ್ರಸ್ತುತ ವಾತಾವರಣ ಯದುವೀರ್ ಅವರ ಗೆಲುವಿಗೆ ಪೂರಕವಾಗಿದೆ ಎಂದು ಅಭಿಪ್ರಾಯಿಸಿದರು.ಯಾವುದೇ ಸರ್ಕಾರಗಳು ಮೂಲಭೂತವಾಗಿ ಅಕ್ಷರ, ಆರೋಗ್ಯ ಮತ್ತು ಉದ್ಯೋಗ ಭದ್ರತೆಯನ್ನು ಜನತೆಗೆ ಒದಗಿಸುವ ಮೂಲಭೂತ ಜವಾಬ್ದಾರಿ ಹೊಂದಿವೆ. ಇದನ್ನು ಮೀರಿ ಇಂದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭಾಗ್ಯಗಳ ಮೂಲಕ ಮಹಿಳೆಯರಿಗೆ ಮಾಸಿಕ 2 ಸಾವಿರ ಹಣವನ್ನು ನೀಡುತ್ತಿದೆ. ಇದರ ಹೊಂದಾಣಿಕೆಗಾಗಿ ಅಬಕಾರಿ ಇಲಾಖೆಯ ಆದಾಯವನ್ನು 23 ಸಾವಿರ ಕೋಟಿ ರೂಪಾಯಿಗಳಿಂದ 40 ಸಾವಿರ ಕೋಟಿಗಳಿಗೆ ಬೆಲೆ ಹೆಚ್ಚಳದ ಮೂಲಕ ಮಾಡಿದೆ. ಗಂಡಸರಿಗೆ ಹೆಂಡ ಕುಡಿಸಿ, ಹೆಂಗಸರಿಗೆ 2 ಸಾವಿರ ರುಪಾಯಿ ನೀಡುತ್ತಿರುವುದಾಗಿ ಗೇಲಿ ಮಾಡಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಳೆದ ಒಂದು ದಶಕದ ಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿದೆ. ಇಂತಹ ಸರ್ಕಾರದ ವಿರುದ್ಧ ‘ಐಎನ್‌ಡಿಐಎ’ ಎನ್ನುವ ಕೂಟವನ್ನು ಕಟ್ಟಿ ಮಾಡುತ್ತಿರುವ ಸುಳ್ಳು ಆರೋಪಗಳಿಗೆ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯವೆನ್ನುವ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡದ್ದು ಕಾಂಗ್ರೆಸ್ ಪಕ್ಷ ಎಂದು ಕಟುವಾಗಿ ನುಡಿದರು.ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಈ ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರನ್ನು ಪಕ್ಷಾತೀತವಾಗಿ, ರಾಜಕೀಯ ಮರೆತು ಗೆಲ್ಲಿಸುವ ಕೆಲಸವಾಗಬೇಕು. ಕಳೆದ 10 ವರ್ಷಗಳ ಅವಧಿಯ ಮೋದಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಗಳಾಗಿಲ್ಲ. ಹೀಗಿದ್ದರೂ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರ ಬಂದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ ಎಂದು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ನಾವು ಹೊರ ಬರಬೇಕು ಮತ್ತು ಯದುವೀರ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ , ಮುಖಂಡ ಮನ್ಸೂರ್ ಆಲಿ ಮಾತನಾಡಿದರು.ಎನ್ ಡಿ ಎ ಪರ ಮತಯಾಚಿಸುತ್ತೇನೆ!: ನಾನು ಯಾವುದೇ ಪಕ್ಷದಲ್ಲಿ ಇದ್ದರೂ ತಪ್ಪುಗಳನ್ನು ತಪ್ಪು ಎನ್ನುತ್ತೇನೆ. ಸರಿ ಇರುವುದನ್ನು ಯಾವುದೇ ಪಕ್ಷದದ್ದಾದರೂ ಸರಿ ಅಂತ ಒಪ್ಪುತ್ತೇನೆ. ನಾನು ಈಗ ಬಿಜೆಪಿ ಎಂಎಲ್ ಸಿ ಆದ್ದರಿಂದ ಎನ್ ಡಿ ಎ ಪರವಾಗಿ ಮತಯಾಚಿಸುತ್ತೇನೆ ಎಂದು ಎಂಎಲ್ಸಿ ವಿಶ್ವನಾಥ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೆ. ಮುದ್ದೆಹನುಮೇಗೌಡ್ರು ನಮ್ಮ ರೀತಿಯೇ ಬಿಜೆಪಿ ಜೆಡಿಎಸ್ ಎಲ್ಲಾ ನೋಡಿ ಬಂದಿದ್ದಾರೆ. ನಿನ್ನೆ ಬಂದವರಿಗೆ ಇಂದು ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು.ಪ್ರಾಮಾಣಿಕತೆ, ಅನುಭವ ಎಲ್ಲವನ್ನೂ ನೋಡಿ ರಾಜಕೀಯದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ.ಇದನ್ನು ತಪ್ಪಾಗಿ ಭಾವಿಸಬಾರದು. ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದನ್ನು ನೆಗೆಟಿವ್ ಆಗಿ ಭಾವಿಸಬಾರದು ಎಂದ ವಿಶ್ವನಾಥ್ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))