ಸಾರಾಂಶ
ಹೊಸಕೋಟೆ: ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ ನಮ್ಮ ಜವಾಬ್ದಾರಿಯೂ ಹೌದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ ತಿಳಿಸಿದರು.
ನಗರದಲ್ಲಿ ಭಾರತ ಸರ್ಕಾರದ ಚುನಾವಣಾ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಂವಿಎಂ ಎಜುಕೇಶನ್ ಟ್ರಸ್ಟ್ ಹಾಗೂ ಭಗತ್ ಸಿಂಗ್ ಯುವಜನ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮತದಾನದ ಜವಾಬ್ದಾರಿಯನ್ನೂ ನಾವು ನಿಷ್ಠೆಯಿಂದ ನಿಭಾಯಿಸಬೇಕಿದೆ. ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ನಾವೆಲ್ಲರೂ ಮತ ಚಲಾಯಿಸಬೇಕು. ಆದ್ದರಿಂದ ಮತ ಚಲಾಯಿಸುವ ಅವಕಾಶವನ್ನು ನಾವೆಂದೂ ಕಳೆದುಕೊಳ್ಳಬಾರದು ಹಾಗೂ ನಾವು ಕೊಡುವ ಒಂದೊಂದು ಮತವೂ ನಮ್ಮ ಸ್ವಸ್ಥ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ. ನಮ್ಮೆಲ್ಲರ ಜವಾಬ್ದಾರಿ ಈ ದೇಶಕ್ಕೆ ಸೂಕ್ತ ಜನ ಪ್ರತಿನಿಧಿಯನ್ನು ಆರಿಸುವುದೂ ಅಷ್ಟೇ ಮುಖ್ಯ. ಆದ್ದರಿಂದ ತಪ್ಪದೇ ಮತ ಚಲಾಯಿಸಿ ಎಂದು ತಿಳಿಸಿದರು.
ಪಟ್ಟಣದ ಐಟಿಐ ಕಾಲೇಜಿನ ಪ್ರಾಚಾರ್ಯ ಎಂ.ನಾಗರಾಜ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ನಮ್ಮೆಲ್ಲರಿಗೂ ಸಿಕ್ಕಿರುವ ಸಮಾನ ಹಕ್ಕು. ಆದ್ದರಿಂದ ಮತ ಚಲಾಯಿಸುವ ಮೂಲಕ ನಮ್ಮ ಹಿತ ಕಾಪಾಡುವ ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯುವ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.ಶ್ರೀ ಗುರುಕುಲ ಅಕಾಡೆಮಿಯ ಆಕಾಶ್ ಗ್ಲೋಬಲ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಸ್.ಪ್ರದೀಪ ನೇತೃತ್ವದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ, ಉಪನ್ಯಾಸ ಹಾಗೂ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಬೆಂ.ಗ್ರಾ. ಜಿಲ್ಲಾ ನೆಹರು ಯುವ ಕೇಂದ್ರ ಕಚೇರಿಯ ಸ್ನೇಹ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೊಸಕೋಟೆ ತಾಲೂಕು ಯುವ ಸ್ಪಂದನದ ಯುವ ಸಮಾಲೋಚಕಿ ಮಧುಶ್ರೀ, ಕಸಾಪ ಜಿಲ್ಲಾ ವಿಶೇಷ ಪ್ರತಿನಿಧಿ ಎಂಎನ್‌ಆರ್ ನಟರಾಜ್ ಇತರರಿದ್ದರು.ಫೋಟೋ: 9 ಹೆಚ್‌ಎಸ್‌ಕೆ 2
ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ ಕರಪತ್ರ ಬಿಡುಗಡೆಗೊಳಿಸಿದರು.