ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು/ಮೈಸೂರು
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಪ್ರತಿನಿಧಿಸುತ್ತಿರುವ ಮೈಸೂರು-ಕೊಡಗು ಕ್ಷೇತ್ರಕ್ಕೆ ದಿಢೀರೆಂದು ಮೈಸೂರು ವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರ ಹೆಸರು ಚರ್ಚೆಗೆ ಬಂದಿದೆ. ಶನಿವಾರ ಇಡೀ ದಿನ ಚರ್ಚೆಯಾಗಿದೆ.
ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಯದುವೀರ ಅವರ ಬಗ್ಗೆಯೂ ಚರ್ಚೆ ನಡೆದಿದೆ. ಈ ಕ್ಷೇತ್ರದ ಸದ್ಯದ ರಾಜಕೀಯ ಸ್ಥಿತಿ, ಮುಖಂಡರ ಅಭಿಪ್ರಾಯಗಳ ಕುರಿತು ಚರ್ಚಿಸುವ ವೇಳೆ ಯದುವೀರ ಅವರ ಹೆಸರು ಚರ್ಚೆಗೆ ಬಂದಿದೆ.
ಇದಕ್ಕೆ ಪೂರಕವಾಗಿ ಶನಿವಾರ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ಪಾರ್ಲಿಮೆಂಟರಿ ಬೋರ್ಡಿನಲ್ಲಿ ಏನಾದರೂ ಆಗಬಹುದು.
ಅಲ್ಲಿಯ ತನಕ ಎಲ್ಲರೂ ಕಾಯಬೇಕಾಗುತ್ತದೆ. ಸದ್ಯಕ್ಕೆ ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹೊಸ ಮುಖಕ್ಕೆ ಮಣೆ ಹಾಕುವುದು ಪಕ್ಷದಲ್ಲಿ ಸಾಮಾನ್ಯ. ಹೊಸ ಚಿಗುರು, ಹಳೆ ಬೇರು ಎಂಬುದು ನಡೆಯುತ್ತಲೇ ಇರುತ್ತದೆ. ರಾಜಕೀಯದಲ್ಲಿ ಇದೇ ನಿಶ್ಚಿತ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಪಕ್ಷ ಕೈ ಬಿಡಲ್ಲ: ಈ ನಡುವೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪ್ರತಾಪ್ ಸಿಂಹ, ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನ. ರಾಜ್ಯದಲ್ಲಿ 28 ಮಂದಿ ಸಂಸದರಿದ್ದಾರೆ. ಅವರ ಕೆಲಸ ನೋಡಿ ಟಿಕೆಟ್ ನೀಡುತ್ತಾರೆ. ಜನ ಖುಷಿಯಾಗಿದ್ದಾರೆಂದರೆ ಮೇಲಿನವರು ಅದೇ ರೀತಿಯ ನಿರ್ಧಾರ ಮಾಡುತ್ತಾರೆ.
ಜನ ನನ್ನ ಕೈ ಹಿಡಿಯಲು ರೆಡಿ ಇದ್ದಾರೆ. ಅದೇ ರೀತಿ ಪಕ್ಷ ಕೂಡ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ ಎಂದರು.ಗ್ರೇಟರ್ ಮೈಸೂರು ಮಾಡಲು ನಾನು ಹೊರಟಿದ್ದೇನೆ. ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದೇನೆ.
ಹಿಂದುತ್ವದ ಪರ ಕೆಲಸ ಮಾಡಿದ್ದೇನೆ. ಕರ್ನಾಟಕ ಆಳಿದವರಿಂದಲೂ ಔಟರ್ ರಿಂಗ್ ರೋಡ್ ತರಲು ಆಗಿಲ್ಲ. ನಾನು ರಾಜ್ಯದಲ್ಲೇ ಮೊದಲು ಮೈಸೂರಿಗೆ ಪೆರಿಫೆರಲ್ ರಿಂಗ್ ರೋಡ್ ತರಲು ಹೊರಟಿದ್ದೇನೆ ಎಂದು ಹೇಳಿದರು.
ನಾನು ಮಾಡಿರುವ ಅಭಿವೃದ್ಧಿ ಕೆಲಸವೇ ನನಗೆ ಶ್ರೀರಕ್ಷೆ. ಮೈಸೂರು-ಕೊಡಗಿನ ಜನ ನನ್ನ ಕೈ ಹಿಡಿಯುತ್ತಾರೆ. ತಾಯಿ ಚಾಮುಂಡಿ ನನ್ನ ಕೈ ಬಿಡಲ್ಲ. ಈ ಬಾರಿಯೂ ನಾನು 2 ರಿಂದ 3 ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ.
10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ಪ್ರೀತಿಸುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ರಾಜಕೀಯದಲ್ಲಿ ದ್ವೇಷ, ಅಸೂಯೆ ಇದ್ದೇ ಇರುತ್ತದೆ. ಚಾಲೆಂಜ್ ಮಾಡಿ ಹೇಳುತ್ತೇನೆ. ನನ್ನ ರೀತಿ ಕೆಲಸ ಯಾರು ಮಾಡಿಲ್ಲ ಎಂದರು.