ಸಾರಿಗೆ ಬಸ್ಸಲ್ಲಿ ಪ್ರಯಾಣಿಸಿ ವಾಟಾಳ್ ಪ್ರತಿಭಟನೆ

| Published : Jan 06 2025, 01:00 AM IST

ಸಾರಾಂಶ

ರಾಮನಗರ: ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಲ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಮನಗರ: ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಲ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ವಾಟಾಳ್ ನಾಗರಾಜ್ ಅವರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಾಮನಗರದಿಂದ ಚನ್ನಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಉಚಿತವಾಗಿ ಹಣ ನೀಡುತ್ತಿರುವಂತಹ ಗೃಹಲಕ್ಷ್ಮಿ ಯೋಜನೆಯ ರೀತಿಯಲ್ಲಿಯೇ ಪುರುಷರಿಗೂ ಹಣ ನೀಡಬೇಕು. ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಇಲ್ಲವೆ ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಸಾರಿಗೆ ಬಸ್ಸುಗಳ ಪ್ರಯಾಣ ದರ ಹೆಚ್ಚಳ ಅವೈಜ್ಞಾನಿಕವಾಗಿದೆ. ರಾಜ್ಯಸರ್ಕಾರ ಒಂದು ಕಡೆ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ, ಪುರುಷರಿಂದ ದರೋಡೆ ಮಾಡುತ್ತಿದ್ದಾದೆ. ಇದು ದೊಡ್ಡ ತಾರತಮ್ಯವಾಗಿದೆ ಎಂದು ಟೀಕಿಸಿದರು.

ಇತಿಹಾಸದಲ್ಲಿಯೇ ಪುರುಷ ಮತ್ತು ಮಹಿಳೆಯರು ಬೇರೆ ಬೇರೆ ಎಂದು ತಾರತಮ್ಯ ಮಾಡಿಲ್ಲ. ಮಹಿಳೆಯರ ಬಗ್ಗೆ ನಮಗೆ ಗೌರವ ಇದೆ. ಅವರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ನೀಡಿದ್ದು ಸಂತೋಷ. ಆದರೆ, ಪುರುಷರನ್ನು ಏಕೆ ಕಡೆ ಗಣಿಸಲಾಗುತ್ತಿದೆ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಚಿಂತನೆಯೋ ಅಥವಾ ಬೇರೆಯವರು ಸಲಹೆ ನೀಡಿದ್ದಾರೊ ಸ್ಪಷ್ಟ ಪಡಿಸಲಿ ಎಂದು ಆಗ್ರಹಿಸಿದರು.

ಪತಿ ಪತ್ನಿ, ಅಣ್ಣ ತಂಗಿ, ಅಕ್ಕ ತಮ್ಮ, ತಾಯಿ ತಂದೆಯನ್ನು ಬೇರೆ ಬೇರೆ ಮಾಡಿರುವುದು ಶಾಸ್ತ್ರದ ಪ್ರಕಾರ ಪಾಪದ ಕೆಲಸ ಅನ್ನುತ್ತಾರೆ. ಇದು ಪುರುಷರಿಗೆ ಮಾಡುತ್ತಿರುವ ಅಪಮಾನ. ಇದನ್ನು ಮಹಿಳೆಯರೂ ಒಪ್ಪುವುದಿಲ್ಲ. ಕುಟುಂಬದಲ್ಲಿನ ತಂದೆ, ಅಣ್ಣ, ತಮ್ಮನಿಗೆ ಸೌಲಭ್ಯ ಕೊಡದಿರುವುದು ಅವರಿಗೂ ನೋವು ತಂದಿದೆ. ಪುರುಷರಿಗೂ ಉಚಿತ ಬಸ್ ಪ್ರಯಾಣ ಮಾಡಬೇಕು ಎಂದು ಒತ್ತಾಯಿಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ಹಣ ನೀಡುತ್ತೀರಿ. ಪುರುಷರಿಗೆ ನೀಡದಿರುವುದು ಅಪಾಯಕಾರಿ ಬೆಳವಣಿಗೆ. ಮುಂದಿನ ಬಜೆಟ್‌ನಲ್ಲಿ ಸಿದ್ದರಾಮಯ್ಯರವರು ಈ ತಾರತಮ್ಯ ಸರಿದೂಗಿಸಬೇಕು. ಇಲ್ಲದಿದ್ದರೆ ವಾಟಾಳ್ ಪಕ್ಷ ಪುರುಷರನ್ನು ಸಂಘಟಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯ ಸುಧಾ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ರಾಜು, ಶ್ರೀನಿವಾಸ್, ಆನಂದ್, ಶಿವರಾಜು, ವಾಟಾಳ್ ಪಕ್ಷದ ಪಾರ್ಥ ಸಾರಥಿ, ನಾರಾಯಣಸ್ವಾಮಿ, ಮಹದೇವ್ ಮತ್ತಿತರರು ಭಾಗವಹಿಸಿದ್ದರು.

5ಕೆಆರ್ ಎಂಎನ್ 4.ಜೆಪಿಜಿ

ರಾಮನಗರದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.