ಶಿವಕುಮಾರ ಕುಷ್ಟಗಿ

ಗದಗ: ಮಳೆಯ ಅಭಾವದಿಂದಾಗಿ ಜಿಲ್ಲಾದ್ಯಂತ ಕಣ್ಣೀರಿನ ಕಥೆಗಳ ಸರಮಾಲೆಯೇ ಶುರುವಾಗಿದೆ. ಬರಗಾಲದಿಂದಾಗಿ ನದಿ ಮೂಲಗಳು ಕರಗುತ್ತಿವೆ. ಭೂಮಿಯ ಒಡಲಲ್ಲಿದ್ದ ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಪರಿಣಾಮವಾಗಿ, ಜಿಲ್ಲೆಯ ಒಟ್ಟು 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 204 ವಾರ್ಡ್‌ಗಳ ಪೈಕಿ ಬರೋಬ್ಬರಿ 63 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 9 ನಗರ ಸ್ಥಳೀಯ ಸಂಸ್ಥೆಗಳಿವೆ. ಗದಗ ಬೆಟಗೇರಿ, ನಗರಸಭೆ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ ಪುರಸಭೆಗಳು ಹಾಗೂ ಮುಳಗುಂದ, ನರೇಗಲ್ಲ ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊಂದಿವೆ.

ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ನರಗುಂದ ಪುರಸಭೆಗಳ 23 ವಾರ್ಡ್‌ಗಳಲ್ಲಿ ತಲಾ 5 ವಾರ್ಡ್‌ಗಳು, ಮುಂಡರಗಿ ಪುರಸಭೆಯ 23 ವಾರ್ಡ್‌ಗಳಲ್ಲಿ 7 ವಾರ್ಡ್‌ಗಳು, ರೋಣ ಪುರಸಭೆಯ 23 ವಾರ್ಡ್‌ಗಳಲ್ಲಿ 3 ವಾರ್ಡ್‌ಗಳು ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿಯ 19 ವಾರ್ಡ್‌ಗಳಲ್ಲಿ 3 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಲಿದೆ.

ಈ ಪೈಕಿ ಗದಗ- ಬೆಟಗೇರಿ ನಗರಸಭೆಯ ಒಟ್ಟು 35ಕ್ಕೆ 35 ವಾರ್ಡ್‌ಗಳಲ್ಲೂ ನೀರಿನ ತೀವ್ರ ಅಭಾವ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳೇ ಅಂದಾಜಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ. ಸದ್ಯಕ್ಕೆ ನರೇಗಲ್ಲ ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಯಾವುದೇ ನೀರಿನ ಅಭಾವ ಕಂಡುಬಂದಿಲ್ಲವಾದರೂ, ಉಳಿದೆಡೆ ಪರಿಸ್ಥಿತಿ ಕೈಮೀರುತ್ತಿದೆ.


3.5 ಲಕ್ಷ ಜನರಿಗೆ ಸಮಸ್ಯೆ: ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 3.5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹಾಗೂ ಜಿಲ್ಲಾದ್ಯಂತ ಇರುವ 50ಕ್ಕೂ ಹೆಚ್ಚು ಕೊಳಗೇರಿ (ಸ್ಲಂ) ಪ್ರದೇಶಗಳ ಶ್ರಮಿಕ ವರ್ಗದವರು ಬಿಂದಿಗೆ ನೀರಿಗಾಗಿ ಪರಿತಪಿಸುತ್ತಿದ್ದಾರೆ. ದುಡಿದು ಉಣ್ಣುವ ಬಡವರ ಬಡಾವಣೆಗಳಲ್ಲಿ, ಕೆಲಸ- ಕಾರ್ಯಗಳನ್ನು ಬದಿಗೊತ್ತಿ ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿ ಮಾರ್ಪಟ್ಟಿದೆ. ಇಲ್ಲವೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಳುಹಿಸುವ ನೀರಿನ ಟ್ಯಾಂಕರ್‌ಗಳಿಗಾಗಿ ಕಾದು ನಿಲ್ಲುವ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ.

ಟ್ಯಾಂಕರ್ ಮಾಫಿಯಾ: ಜನರ ಈ ಕಷ್ಟ ಹಾಗೂ ಕುಡಿಯುವ ನೀರಿನ ತುರ್ತು ಅಗತ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಜಿಲ್ಲೆಯಲ್ಲಿ ತಲೆ ಎತ್ತಿ ನಿಂತಿದೆ. ಪ್ರತಿವರ್ಷ ಮಾರ್ಚ್, ಏಪ್ರಿಲ್ ತಿಂಗಳ ಬೇಸಿಗೆಯಲ್ಲಿ ಅತ್ಯಧಿಕ ಬೆಲೆಗೆ ಟ್ಯಾಂಕರ್ ನೀರು ಮಾರಾಟ ಮಾಡುವುದು ಸಾಮಾನ್ಯ ಸನ್ನಿವೇಶವಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಸಾಂಪ್ರದಾಯಿಕ ಮಳೆಗಾಲದ ದಿನಗಳಲ್ಲೇ ಖಾಸಗಿ ಟ್ಯಾಂಕರ್ ದಂಧೆ ಬಲು ಜೋರಾಗಿಯೇ ನಡೆಯುತ್ತಿದೆ.ಸಮಸ್ಯಾತ್ಮಕ ವಾರ್ಡ್‌ಗಳು: ಗಜೇಂದ್ರಗಡದ ವಾರ್ಡ್ ನಂ 4, 16, 17, 22, 23, ಲಕ್ಷ್ಮೇಶ್ವರದ ವಾರ್ಡ್‌ ನಂ. 1, 16, 17, 22, 23, ಮುಂಡರಗಿ ಪುರಸಭೆಯ ವಾರ್ಡ್‌ ನಂ. 2, 3, 4, 5, 7, 9, 17, ನರಗುಂದ ಪುರಸಭೆಯ ವಾರ್ಡ್ ನಂ. 3, 4, 5, 17, 23, ರೋಣ ಪುರಸಭೆಯ ವಾರ್ಡ್ ನಂ. 11, 20, 16, ಮುಳಗುಂದ ಪಪಂನ ವಾರ್ಡ್ ನಂ. 1, 7, 5ರಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ನದಿ ಮೂಲಗಳಲ್ಲಿ ನೀರು ಕಡಿಮೆಯಾಗಿದ್ದು, ಅಂತರ್ಜಲ ಮಟ್ಟವೂ ಕುಸಿದಿರುವುದು ನಿಜ. ಗದಗ ನಗರಸಭೆ ಸೇರಿದಂತೆ ಸಮಸ್ಯೆ ಇರುವ 63 ವಾರ್ಡ್‌ಗಳನ್ನು ಗುರುತಿಸಿ, ಪರ್ಯಾಯ ನೀರಿನ ಮೂಲಗಳಿಂದ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ತೀವ್ರ ಅಭಾವವಿರುವ ಕೊಳಗೇರಿ ಹಾಗೂ ಬಡಾವಣೆಗಳಿಗೆ ಸ್ಥಳೀಯ ಸಂಸ್ಥೆಗಳ ವತಿಯಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿ ಬಸನಗೌಡ ಜಿ. ತಿಳಿಸಿದರು.