ಸಾರಾಂಶ
ಸಿರಿಗೆರೆ: ಬರುವ ಗಾಂಧಿ ಜಯಂತಿಯ ಒಳಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
೩೪.೨೫ ರು. ವೆಚ್ಚದ ಸಾಸಲು ಸರ್ಕಲ್-ಸಿರಿಗೆರೆ-ಹಿರೇಬೆನ್ನೂರು ಕಾಂಕ್ರಿಟ್ ರಸ್ತೆಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಗಟ್ಟಿಮಟ್ಟದ ಸಿಸಿ ರಸ್ತೆ ಆದ ಮೇಲೆ ರೈತರು ಹೊಲ ಹಾಗೂ ತೋಟಗಳಿಗೆ ಪೈಪ್‍ಲೈನ್ ಹಾಕಿಕೊಳ್ಳಬೇಡಿ. ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದೂರದೃಷ್ಟಿಯ ಪರಿಣಾಮವಾಗಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯೂ ಜಾರಿಗೊಳ್ಳುತ್ತಿದೆ. ಗಾಂಧಿ ಜಯಂತಿಯ ಒಳಗೆ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ಚಿಕ್ಕಜಾಜೂರು, ತಾಳ್ಯ, ರಾಮಗಿರಿ, ಮಲ್ಲಾಡಿಹಳ್ಳಿ, ಹೊಳಲ್ಕೆರೆ ಕಸಬಾ ಭಾಗದಲ್ಲಿ ಸಮಸ್ಯೆಯಿರುವುದರಿಂದ ಒಂದು ಮುಕ್ಕಾಲು ಕಿ.ಮೀ. ಪೈಪ್‍ಲೈನ್ ತೆಗೆಯಲು ಬಿಟ್ಟಿರಲಿಲ್ಲ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರು ಹಾಗೂ ರಾಜಕಾರಣಿಗಳ ಜೊತೆ ಮಾತುಕತೆ ನಡೆಸಿದ್ದರಿಂದ ಪೊಲೀಸ್ ಬಂದೋಬಸ್ತ್ ನಡುವೆ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ನಾಲ್ಕು ವರ್ಷ ಹನ್ನೊಂದು ತಿಂಗಳು ರಾಜಕೀಯ ಮಾಡಲ್ಲ. ಎಲ್ಲಾ ಪಕ್ಷದವರ ವಿಶ್ವಾಸ ಪಡೆದು ಕ್ಷೇತ್ರದ ಜನರಿಗೆ ಅನುಕೂಲವಾಗುವಂತ ಕೆಲಸ ಮಾಡುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಕೇವಲ ಒಂದು ತಿಂಗಳು ಮಾತ್ರ ರಾಜಕೀಯ ಮಾಡುತ್ತೇನೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡುವ ಜಾಯಮಾನ ನನ್ನದು. 1994ರಲ್ಲಿ ಮೊದಲ ಬಾರಿಗೆ ಭರಮಸಾಗರದಿಂದ ಸ್ಪರ್ಧಿಸಿ ಶಾಸಕನಾಗಿದ್ದೆ. ಒಂದು ಬಾರಿ ಗೆದ್ದವರು 2ನೇ ಬಾರಿಗೆ ಭರಮಸಾಗರದಲ್ಲಿ ಗೆಲ್ಲುವುದಿಲ್ಲ ಎನ್ನುವ ಮೂಢನಂಬಿಕೆಯಿತ್ತು. ಆದರೆ 2ನೇ ಬಾರಿಗೆ ಸ್ಪರ್ಧಿಸಿದಾಗಲೂ ಭರಮಸಾಗರ ಕ್ಷೇತ್ರದ ಜನ ಮತ ನೀಡಿ ನನ್ನನ್ನು ಗೆಲ್ಲಿಸಿದರು. ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಚಿಕ್ಕಜಾಜೂರು ಬಳಿ 12 ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲಾಗುತ್ತಿದೆ. ಡಾಕ್ಟರ್‌ಗಳು ಇಲ್ಲಿಯೇ ಉಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ 2 ಕೋಟಿ ರು. ವೆಚ್ಚದಲ್ಲಿ ಕ್ವಾರ್ಟಸ್‍ಗಳನ್ನು ಕಟ್ಟಲಾಗುವುದೆಂದರು.ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ರುದ್ರಪ್ಪ, ದೇವರಾಜ್, ಓಂಕಾರಣ್ಣ, ಮಹೇಶಣ್ಣ, ಚಂದ್ರಣ್ಣ, ರುದ್ರೇಗೌಡ್ರು, ನಾಗೇಂದ್ರಪ್ಪ, ಇಂಜಿನಿಯರ್ ಕಾಂತರಾಜ್, ಉದಯ ಶಿವಕುಮಾರ್ ಕಂಪನಿ ಲಿಮಿಟೆಡ್‍ನ ಇಂಜಿನಿಯರ್ ಮಂಜುಶ್ರಿ, ಗ್ರಾಮಸ್ಥರು ಇದ್ದರು.