ಸಾರಾಂಶ
ಅಫಜಲ್ಪುರ : ಮೂರು ವರ್ಷಗಳ ಬಳಿಕ ಬಂಕಲಗಾ ಗ್ರಾಮದ ಸೇತುವೆಗೆ ನೀರು ಬಂದಿದೆ. ತಾಲೂಕಿನಲ್ಲಿ ಭೀಮಾ ನದಿ ಮತ್ತು ಅದರ ಉಪ ನದಿಗಳಾದ ಅಮರ್ಜಾ, ಬೋರಿಹಳ್ಳಗಳಿಗೆ ನಿರಂತರವಾಗಿ ನೀರು ಬರುತ್ತಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮಹಾರಾಷ್ಟ್ರದಿಂದ ಹರಿದು ಬರುವ ಅಮರ್ಜಾ ನದಿ ಕೊನೆಗೆ ಭೀಮಾ ನದಿಗೆ ಸೇರುತ್ತದೆ. ಅಲ್ಲದೆ ಅಮರ್ಜಾ ಜಲಾಶಯಕ್ಕೆ ನೀರು ಬದ್ದಿದ್ದರಿಂದ ಈ ಭಾಗದ ಸುಮಾರು 20 ಗ್ರಾಮಗಳಿಗೆ ಕುಡಿವ ನೀರು ಮತ್ತು ಕೃಷಿಗೆ ಅನುಕೂಲವಾಗಲಿದೆ. ಕಳೆದ 3 ವರ್ಷಗಳಿಂದ ಅಮರ್ಜಾ ನದಿ ಬತ್ತಿದ್ದರಿಂದ ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದರು. ಈ ವರ್ಷದ ಮತ್ತೆ ಕಬ್ಬು ನಾಟಿ ಮಾಡಲು ಮುಂದಾಗಿರುವ ರೈತರು ಜಮಖಂಡಿಯಿಂದ ಪ್ರತಿ ಟನ್‌ಗೆ ₹6 ಸಾವಿರ ಹಣ ನೀಡಿ ಕಬ್ಬಿನ ಬೀಜ ತರಿಸುತ್ತಿದ್ದಾರೆ.
‘ಅಮರ್ಜಾ ಜಲಾಶಯ ತುಂಬಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿದ್ದು ಮುಂದಿನ ದಿನಗಳಲ್ಲಿ ನದಿ ಪಾತ್ರದ ಗ್ರಾಮಗಳಾದ ಜೇವರ್ಗಿ, ನಂದರಗಿ, ಗೌರ(ಬಿ) ದಿಕ್ಸಂಗ, ಜೇವರ್ಗಿ (ಕೆ), ಅಳ್ಳಗಿ (ಕೆ) ಅಳ್ಳಗಿ (ಬಿ), ಶಿರವಾಳ ಗ್ರಾಮಗಳಿಗೆ ಅನುಕೂಲವಾಗಿದೆ’ ಎಂದು ನಂದರ್ಗಾ ಗ್ರಾಮದ ರೈತ ಸಿದ್ದಾರಾಮ ಜಾಲವಾದಿ ಹೇಳಿದರು.
ತಾಲೂಕಿನಲ್ಲಿ ಕಬ್ಬಿನ ಬೀಜ ದೊರೆ ಯುತ್ತಿಲ್ಲ. ರೇಣುಕಾ ಸಕ್ಕರೆ ಕಾರ್ಖಾನೆ, ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಕಬ್ಬು ನಾಟಿ ಮಾಡುವ ರೈತರಿಗೆ ಬೀಜ, ಗೊಬ್ಬರವನ್ನು ನೀಡಬೇಕು. ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದಾಗ ಬಾಕಿ ಮುರಿದು ಬಿಲ್ ನೀಡಬೇಕು’ ಎನ್ನುತ್ತಾರೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ.
ಸರ್ಕಾರ ವ್ಯವಸಾಯ ಸಹಕಾರ ಸಂಘಗಳಿಗೆ ರೈತರಿಗೆ ಬೆಳೆ ಸಾಲ ನೀಡಲು ಅನುದಾನ ನೀಡಬೇಕು. ಹೊಸ ರೈತರಿಗೂ ಸಾಲ ನೀಡುವ ವ್ಯವಸ್ಥೆ ಆಗಬೇಕು. ರಸಗೊಬ್ಬರ, ಬಿತ್ತನೆ ಬೀಜ ವ್ಯವಸಾಯ ಸಹಕಾರಿ ಸಂಘದ ಮೂಲಕ ಮಾರಾಟವಾಗುವ ವ್ಯವಸ್ಥೆ ಸರ್ಕಾರ ಮಾಡಿಕೊಡಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ