ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡ ಕಲಿಸದಿದ್ದರೆ ಸಿಬಿಎಸ್‌ಸಿ ನಮಗೆ ಬೇಕಾಗಿಲ್ಲ, ರಾಜ್ಯದಲ್ಲಿ ಆ ಪದ್ದತಿ ಕಾಲಿಡಕೂಡದು ಎಂದು ಹೇಳುವ ದೃಢವಾದ ಕಾನೂನು ತರಲು ಸಾಧ್ಯವಿಲ್ಲವೆ? ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲವೇ? ಎಂದು ಸರ್ಕಾರವನ್ನು ಕೇಳಬೇಕಿದೆ. ಕನ್ನಡ ಕಲಿಸದ ವಿಶ್ವವಿದ್ಯಾಲಯಗಳ ಸ್ವಾಯತ್ತ ಕಾಲೇಜು, ಶಾಲೆಗಳು ರಾಜ್ಯದಲ್ಲಿ ಇರಲು ಲಾಯಕ್ಕಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಬೇಕು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.ನಗರದ ಕನ್ನಡ ಭವನದಲ್ಲಿ ಅಮೂಲ್ಯ ಪುಸ್ತಕ ಪ್ರದರ್ಶನ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ತಜ್ಞ ವೈದ್ಯ, ಲೇಖಕ ನಾಗರಾಜು ಜಿ.ಬಿ. ಭೈರೇನಹಳ್ಳಿ ಅವರ ತಲೆಗೆ ಬಿದ್ದ ಏಟು ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
2015ರಲ್ಲಿ ಜಾರಿಗೆ ಬಂದ ಕನ್ನಡ ಭಾಷಾ ಕಲಿಕೆ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಕೇಂದ್ರ ಪಠ್ಯಕ್ರಮ ಇರುವ ಶಾಲೆಗಳು ಒಂದು ಭಾಷೆಯಾಗಿ ಕನ್ನಡ ಕಲಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರಿ ಕಾಲೇಜುಗಳಂತೆ ಖಾಸಗಿ ವಿಶ್ವವಿದ್ಯಾಲಯಗಳ ಸ್ವಾಯತ್ತ ಕಾಲೇಜುಗಳಲ್ಲಿ ನಾಲ್ಕು ಸೆಮಿಸ್ಟರ್ ವರೆಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸದ ಖಾಸಗಿ ವಿಶ್ವ-ವಿದ್ಯಾಲಯಗಳಿಗೆ ರಾಜ್ಯದಲ್ಲಿ ಜಾಗಕೊಡುವುದಿಲ್ಲ ಎಂದು ಹೇಳಬೇಕು.ಇದು ಕನ್ನಡ ಸಾಹಿತ್ಯ, ಸಂಸ್ಕೃತಿ, ಪತ್ರಿಕೆ, ನಾಟಕ, ಸಿನಿಮಾ ಉಳಿಸುವ ಕೆಲಸವಾಗಲಿದೆ ಎಂದು ಪ್ರೊ.ಬರಗೂರು ಹೇಳಿದರು.ಕೃತಿಯ ಲೇಖಕ ನಾಗರಾಜು ತಾವು ನೋಡಿದ್ದನ್ನು ತನ್ನದಾಗಿಸಿಕೊಂಡು ಬರೆದಿದ್ದಾರೆ. ತಮ್ಮ ಪರಿಸರದ ಒಳಗಡೆ ಕಂಡದ್ದನ್ನು, ಮನಸ್ಸಿನ ಭಾವನೆಗಳನ್ನು ಕಥೆಯಲ್ಲಿ ಕಟ್ಟುತ್ತಾ ಹೋಗಿದ್ದಾರೆ. ಸಾಮಾಜಿಕ ನೈತಿಕತೆ ಇಲ್ಲಿನ ಕಥೆಗಳ ಕೇಂದ್ರ ಪ್ರಜ್ಞೆಯಾಗಿದೆ. ಸಮಾಜದಲ್ಲಿನ ಸುಳ್ಳು ಸಂಕಥನನಗಳ ಸೃಷ್ಟಿ, ಧರ್ಮದ್ವೇಷದರಾಜಕೀಯ, ಇತರೆ ಸೂಕ್ಷ್ಮ ವಿಚಾರಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ, ಸಾಹಿತಿ ಚ.ಹ. ರಘುನಾಥ ಮಾತನಾಡಿ, ಕಥೆಗಾರ ನಾಗರಾಜು ಅವರು ಅಭಿವ್ಯಕ್ತಿಯ ಹುಡಕಾಟದಲ್ಲಿ ಇರುವ ಬರಹಗಾರ. ಕವಿತೆಯಿಂದ ಆರಂಭಿಸಿ ಕಾದಂಬರಿ, ಪ್ರಬಂಧ, ಸಣ್ಣ ಕಥೆಗಳನ್ನು ರಚಿಸಿದ್ದಾರೆ.ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯವನ್ನೂ ಪ್ರವೃತ್ತಿಯಾಗಿ ತೆಗೆದುಕೊಂಡು ಗುಣಮಟ್ಟದ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.ಕೃತಿಕಾರ ಡಾ.ನಾಗರಾಜು ಜಿ.ಬಿ ಭೈರೇನಹಳ್ಳಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಲೇಖಕಿಯರಾದ ಮಲ್ಲಿಕಾ ಬಸವರಾಜು, ಆಶಾ ಬಗ್ಗನಡು ಭಾಗವಹಿಸಿದ್ದರು.