ಕೇಂದ್ರದ ಎಫ್‌ಆರ್‌ಪಿಗಿಂತ ₹ 700 ಕೊಡ್ಸಿದ್ದೇವೆ

| Published : Nov 09 2025, 03:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎಲ್ಲ ಕಾರ್ಖಾನೆಯವರನ್ನು ಒಪ್ಪಿಸಿ ಒಂದು ನಿರ್ಣಯಕ್ಕೆ ಬಂದಿದ್ದೇವೆ, ಕಾರ್ಖಾನೆಯವರೆಲ್ಲರೂ ಒಪ್ಪಿದ್ದಾರೆ. ಆದರೆ, ಬಾಗಲಕೋಟೆ, ವಿಜಯಪುರದಲ್ಲಿ ಗೊಂದಲ ಇದೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಲ್ಲ ಕಾರ್ಖಾನೆಯವರನ್ನು ಒಪ್ಪಿಸಿ ಒಂದು ನಿರ್ಣಯಕ್ಕೆ ಬಂದಿದ್ದೇವೆ, ಕಾರ್ಖಾನೆಯವರೆಲ್ಲರೂ ಒಪ್ಪಿದ್ದಾರೆ. ಆದರೆ, ಬಾಗಲಕೋಟೆ, ವಿಜಯಪುರದಲ್ಲಿ ಗೊಂದಲ ಇದೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ರಾಜ್ಯ ಸರ್ಕಾರ ಕಬ್ಬಿನ ದರ ₹ 3300 ಘೋಷಣೆ ಬಗ್ಗೆ ವಿಜಯಪುರದಲ್ಲಿ ಗೊಂದಲ ವಿಚಾರದ‌ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಸಕ್ಕರೆ ವಿಚಾರದಲ್ಲಿ ಎಲ್ಲವೂ ಕೇಂದ್ರ ಸರ್ಕಾರದ್ದು. ಎಫ್.ಆರ್.ಪಿ ದರ ನಿಗದಿ ₹3550 ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರ ಗ್ರಾಹಕರ ಇಲಾಖೆಯ ಮಂತ್ರಿ ಯಾರು? ಪ್ರಹ್ಲಾದ ಜೋಶಿ. ಎಫ್‌ಆರ್‌ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರ ಎಂದು ಹೇಳಿದರು.ಕಬ್ಬು ಕಟಾವು, ಸಾಗಾಟ ವೆಚ್ಚ ಎಂಟು, ಒಂಬತ್ತು ನೂರು ಬಂದ್ರೆ. ಕೇಂದ್ರದ ಎಫ್‌ಆರ್‌ಪಿ ಪ್ರಕಾರ ₹2600, ₹2700 ಆಗುತ್ತದೆ. ಈಗ ಎಫ್‌ಆರ್‌ಪಿ ದರಕ್ಕಿಂತ ಏಳು ನೂರು ಹೆಚ್ಚಾಗಿದೆ. ಎಫ್‌ಆರ್‌ಪಿ, ಎಂಎಸ್‌ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರ. ಸಕ್ಕರೆ ರಫ್ತು, ಆಮದು ಮಾಡುವ ನಿರ್ಧಾರ ಕೇಂದ್ರ ಸರ್ಕಾರವೇ ಮಾಡುತ್ತದೆ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡಿದ್ದನ್ನು ರಾಜ್ಯ ಸರ್ಕಾರ ಜಾರಿ ಮಾಡುವ ಕೆಲಸ ಅಷ್ಟೇ. ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್‌ಆರ್‌ಪಿಗಿಂತ ಏಳು ನೂರು ಹೆಚ್ಚು ಕೊಡಿಸಿದ್ದೇವೆ ಎಂದರು.

ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ರೈತರ ಹೋರಾಟದಲ್ಲಿ ಬಿಜೆಪಿಯವರು ರಾಜಕೀಯ ಮಾಡಿದ್ರು, ನಮ್ಮ ಸಹೋದರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲಿ ಹೋಗಿ ಮಲಗಿ ನಾಟಕ ಮಾಡಿದರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಪ್ರಧಾನಿ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ.‌ ಮಹಾರಾಷ್ಟ್ರ ಸಿಎಂ ಬಿಜೆಪಿಯವರು. ಎಂಎಸ್‌ಪಿ ಸಕ್ಕರೆ ದರ ₹31 ಇರೋದನ್ನು ₹ 41ಕ್ಕೆ ಏರಿಸಿ ಎಂದು ಪತ್ರ ಬರೆದಿದ್ದಾರೆ.‌ ಸಕ್ಕರೆ ದರ ಏರಿಕೆಯಾದ್ರೆ ರೈತರಿಗೆ ಅನುಕೂಲ ಆಗುತ್ತೆ. ನಮ್ಮ ರಾಜ್ಯದ್ದು ಎಥೆನಾಲ್ ಶೇ.70 ರಷ್ಟು ಖರೀದಿಯಾಗುತ್ತೆ. 2.70 ಕೋಟಿ ಲಕ್ಷ ಲೀಟರ್ ಉತ್ಪಾದನೆ ಸಾಮರ್ಥ್ಯ ರಾಜ್ಯದಲ್ಲಿದೆ. ಖರೀದಿ ಮಾಡೋದು 40 ಕೋಟಿ ಲೀಟರ್. ಗುಜರಾತ್‌ನಲ್ಲಿ 75 ರಷ್ಟು ಖರೀದಿ ಆಗುತ್ತೆ ಎಂದರು.

ರೈತನ ಮಗನಾಗಿ ಹೋರಾಟದಲ್ಲಿ ಭಾಗಿ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹೌದಾ ರೈತನ ಮಗ ನಾವು ಒಪ್ಪುತ್ತೇವೆ. ನಾವು ನೀವು ರೈತರ ಮಕ್ಕಳು, ಯಡಿಯೂರಪ್ಪ ರೈತರ ಮಕ್ಕಳು ಕರೆಕ್ಟ್. ರೈತರ ಮಕ್ಕಳಾಗಿ ವಿಜಯೇಂದ್ರ ಅವರೇ ಪ್ರಧಾನಿ ಭೇಟಿಗೆ ಅವಕಾಶ ಕೊಡಿಸಲಿ. ಎಂಎಸ್‌ಪಿ, ಎಫ್‌ಆರ್‌ಪಿ ಬಹಳ ಕಡಿಮೆ ಮಾಡಿದ್ದು, ಇದೆಲ್ಲಾ ಮಾಡಿ ರೈತರ ಮಕ್ಕಳಾ ಎಂದು ಪ್ರಶ್ನಿಸಿದರು.

ವಿಜಯಪುರ ರೈತರದ್ದು ಏನಿದೆ ಅದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಜೊತೆಗೆ ಚರ್ಚೆಸುವೆ. ಅವರು ಇವತ್ತು, ನಾಳೆ ಬರಬಹುದು. ಅವರು ಬಂದು ವಿವರಣೆ ಕೊಡುತ್ತಾರೆ ಎಂದು ತಿಳಿಸಿದರು.

-------------

ಕೋಟ್‌

ಲೋಕಸಭೆಯಲ್ಲಿ ಪ್ರಹ್ಲಾದ ಜೋಶಿ ಆಗಸ್ಟ್, ಅಕ್ಟೋಬರ್ ತಿಂಗಳಲ್ಲಿ ಉತ್ತರ ಕೊಟ್ಟ ಪ್ರತಿ ನನ್ನ ಬಳಿ ಇದೆ. ಮತ್ತೆ ಲೋಕಸಭೆಯಲ್ಲಿ ಪ್ರಹ್ಲಾದ ಜೋಶಿ ತಪ್ಪು ಉತ್ತರ ಕೊಡುತ್ತಿದ್ದರೆ ನನಗೆ ಗೊತ್ತಿಲ್ಲ. ಕೇಂದ್ರದ ಜವಾಬ್ದಾರಿ ಬಿಟ್ಟು ರಾಜ್ಯ ಸರ್ಕಾರದ ಮೇಲೆ ರೈತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ರು.‌ ಕಬ್ಬು ದರ ವಿಚಾರ ರಾಜ್ಯ ಸರ್ಕಾರದಲ್ಲ ಅನ್ನೋದು ತಿಳಿದಿದೆ. ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧದ ಷಡ್ಯಂತ್ರವಿದು. ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು. ವಿಜಯೇಂದ್ರ ಅಲ್ಲಿಗೆ ಹೋಗಿ ಮಲಗಿದರು ಯಾಕೆ?. ಬಿಜೆಪಿಯವರು ರಾಜಕೀಯ ಮಾಡಿದ್ರು, ಮತ್ತೆ ಬಿಜೆಪಿಯವರ ಫ್ಯಾಕ್ಟರಿ ಇವೆ, ಇಲ್ಲವೇನು?.

- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು