ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸಾಧಕ-ಬಾಧಕ ಎಲ್ಲವನ್ನು ನೋಡಿಕೊಂಡು ಜಂಟಿ ಸರ್ವೇ(ಜೆಎಂಸಿ) ಮಾಡುತ್ತೇವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬಲವಂತವಾಗಿ ಮಾಡುತ್ತಿರುವ ಸರ್ವೇ ಅಲ್ಲ. ಅಂತಿಮ ಅಧಿಸೂಚನೆ ಹೊರಡಿಸಿದ ಮೇಲೆ ಯಾವ ರೈತರು ನಮಗೆ ಜೆಎಂಸಿ ಮಾಡಿ ಪರಿಹಾರ ಕೊಡಿ ಅಂತ ಹೇಳಿದ್ದಾರೊ ಅವರ ಜಮೀನು ಮಾತ್ರ ಸರ್ವೇ ಮಾಡಲಾಗುತ್ತಿದೆ. ಯೋಜನೆ ವಿರೋಧಿಸುವವರ ಜಮೀನು ಸರ್ವೇ ಮಾಡುವುದಿಲ್ಲ ಎಂದು ಹಿಂಬರಹ ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಆ ರೀತಿ ಹಿಂಬರಹ ಕೊಡಲು ಕಾನೂನಲ್ಲಿ ಅವಕಾಶ ಇಲ್ಲ. ಬೇಕಿದ್ದರೆ ಕೋರ್ಟಿಗೆ ಹೋಗಿ, ತಡೆಯಾಜ್ಞೆ ತರಲಿ. ವಿರೋಧವಿರುವ ರೈತರ ಭೂಮಿಗೆ ಅಧಿಕಾರಿಗಳು ಬಂದಾಗ ಗಲಾಟೆ ಮಾಡಲಿ, ಆದರೆ, ಒಪ್ಪಿಗೆ ಇರುವ ರೈತರ ಭೂಮಿಗೆ ಹೋದಾಗ ಏಕೆ ಗಲಾಟೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಈ ಹಿಂದೆ ಕುಮಾರಸ್ವಾಮಿ ಟೌನ್‌ಶಿಪ್ ಯೋಜನೆ ಮಾಡಿದಾಗ ನಮ್ಮ ನಾಯಕರೇ ಕೋರ್ಟಿಗೆ ಹೋಗಿದ್ದರು. ಆಗ ಕೋರ್ಟ್ ಅರ್ಜಿಯನ್ನು ರಿಜೆಕ್ಟ್ ಮಾಡಿ, ಅಲ್ಲಿ ಟೌನ್‌ಶಿಪ್ ಆಗಬೇಕೆಂದು ಹೇಳಿತ್ತು. ಆದರೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿಗೆ ಕಳಂಕ ತರಲು ಕೇಂದ್ರ ಸಚಿವ ಕುಮಾರಸ್ವಾಮಿ ಪಿತೂರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಬಿಡದಿ ಟೌನ್‌ಶಿಪ್ ವಿಚಾರವನ್ನೇ ದೊಡ್ಡ ಇಷ್ಯೂ ಮಾಡಲು ಹೊರಟಿದ್ದಾರೆ. ಮಂಡಲಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಕುಮಾರಸ್ವಾಮಿ ಕೃಪಾ ಪೋಷಿತ ನಾಟಕ. ಅವಾಂತರ ಸೃಷ್ಟಿ ಮಾಡಬೇಕು ಅಂತಲೇ ಹೀಗೆಲ್ಲ ಮಾಡಿಸಿದ್ದಾರೆ. ಘಟನೆ ಆದ ಒಂದೇ ಗಂಟೆಯಲ್ಲಿ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾಗೆ ಬಂದು ಪೊಲೀಸರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಾರೆ. ನಾನು ಮುಂದೆ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಹುಷಾರ್ ಅಂತಾರೆ. ಇದು ಬಾಲಿಷ ತನದ ವರ್ತನೆ ಅಲ್ಲವೇ ಎಂದು ಪ್ರಶ್ನಿಸಿದರು.

ನಾಳೆ ನೀವು ಪ್ರಧಾನಮಂತ್ರಿ ಆಗಿ ತೊಂದರೆ ಇಲ್ಲ. ಆದರೆ, ಕಾನೂನು ಏನು ಹೇಳುತ್ತದೆಯೋ ಅದರ ಪ್ರಕಾರ ನಾವು ಕೇಳಬೇಕು. ಮಂಡಲಹಳ್ಳಿ ಘಟನೆಗೆ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಆರೋಪಿಸಿದರು.ಶೇ.40ರಷ್ಟು ಜನ ಬೆಂಗಳೂರು ಕಡೆ ಹೋಗಿರುವ ರೈತರು ಮಾತ್ರ ಟೌನ್ ಶಿಪ್ ಯೋಜನೆಗೆ ಒಪ್ಪಿಗೆ ನೀಡಿದ್ದಾರೆಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ದೇವೇಗೌಡರು ತಮ್ಮ ಮಗನಿಗೆ ಮೊದಲು ಬುದ್ದಿ ಹೇಳಲಿ. ಆವತ್ತು ಈ ಯೋಜನೆ ಬೇಡ ನಾನು ರೈತರ ಪರವಾಗಿದ್ದೇನೆ ಅಂದಿದ್ದರೆ ದೇವೇಗೌಡರಿಗೆ ಸಾಷ್ಟಾಂಗ ನಮಸ್ಕಾರ ಹೇಳುತ್ತಿದ್ದೆ. ಆವತ್ತು ಇದೇ ದೇವೇಗೌಡರು ಟೌನ್‌ಶಿಪ್ ಯೋಜನೆ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅದೇನೋ ಮಾಡ್ತಾನೆ ಹೋಗಿ ಅಂತ ಹೇಳಿದ್ದರು. ಇವತ್ತು ಡಿ.ಕೆ.ಶಿವಕುಮಾರ್ ಮೇಲೆ ಕೆಟ್ಟ ಹೆಸರು ಬರಲಿ ಅಂತ ಮಾತನಾಡುತ್ತಿದ್ಡಾರೆ. ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.


ಈ ಯೋಜನೆ ಕೈಬಿಡುವಂತೆ ವಿಧಾನಸಭಾ ಅಧಿವೇಶನದಲ್ಲಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿಸುವುದಾಗಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಆಯಿತು ಈಗ ವಿಧಾನಸಭಾ ಅಧಿವೇಶನ ಬರುತ್ತಿದೆ. ಚರ್ಚೆಗೆ ಬರಲಿ ಮಾತನಾಡುತ್ತೇವೆ ಎಂದು ಬಾಲಕೃಷ್ಣ ಉತ್ತರಿಸಿದರು.

ಬಾಕ್ಸ್‌..........

ಎಚ್ಡಿಕೆ ಬಣ್ಣದ ಮಾತುಗಳಿಗೆ ಮರಳಾಗಬೇಡಿ: ಬಾಲಕೃಷ್ಣ

ರಾಮನಗರ: ಈಗ ಹೆಣ್ಣುಮಕ್ಕಳು ಕೇಸು ಹಾಕಿಸಿಕೊಂಡರು. ವರ್ಷಾನುಗಟ್ಟಲೆ ಕೋರ್ಟಿಗೆ ಅಲೆದಾಡಬೇಕು. ಈಗ ಕುಮಾರಸ್ವಾಮಿ ನಿಮ್ಮೊಂದಿಗೆ ಕೋರ್ಟಿಗೆ ಬರುವುದಿಲ್ಲ. ಅವರ ಬಣ್ಣದ ಮಾತುಗಳಿಗೆ ಮರಳಾಗಬೇಡಿ ಎಂದು ಶಾಸಕ ಬಾಲಕೃಷ್ಣ ರೈತರಲ್ಲಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಗಳ ಮೇಲೆ ಕೈ ಮಾಡಿದಾಗ ಸುಮೋಟೊ ಕೇಸು ದಾಖಲಾಗುತ್ತವೆ. ಈಗ ಅಮಾಯಕ ರೈತರು ವರ್ಷಾನುಗಟ್ಟಲೆ ಕೋರ್ಟ್‌ಗೆ ಅಲೆಯಬೇಕು. ಈಗ ಕುಮಾರಸ್ವಾಮಿ ಬರುತ್ತಾರಾ. ನಮ್ಮ ಹೆಣ್ಣುಮಕ್ಕಳು ಅರ್ಥ ಮಾಡಿಕೊಳ್ಳಬೇಕು. ನಾನು ಒಮ್ಮೆ ಇನ್ಸ್‌ಪೆಕ್ಟರ್ ಮೇಲೆ ಗಲಾಟೆ ಮಾಡಿದ್ದಕ್ಕೆ ನನ್ನ ಮೇಲೂ ಕೇಸು ಹಾಕಿದ್ದರು. ಅಧಿಕಾರಿಗಳ ಮೇಲೆ ಗಲಾಟೆ ಮಾಡಿದರೆ ಹೇಗೆ? ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡಲಿ, ಪೊರಕೆ, ಚಪ್ಪಲಿ ತಗೊಂಡು ಹೊಡೆದರೆ ಹೇಗೆ? ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಮೀಡಿಯಾದಲ್ಲಿ ಚೆನ್ನಾಗಿ ಬರಲಿ ಅಂತ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಬಾಲಕೃಷ್ಣ ಹೇಳಿದರು.

14ಕೆಆರ್ ಎಂಎನ್ 2.ಜೆಪಿಜಿ

ಶಾಸಕ ಬಾಲಕೃಷ್ಣ.