ದೊಡ್ಡಬಳ್ಳಾಪುರ: ಸಾಂಪ್ರದಾಯಿಕ ನೇಕಾರಿಕೆಗೆ ಸವಾಲೊಡ್ಡಿರುವ ರೇಪಿಯರ್‌ ಮಗ್ಗದ ಸೀರೆಗಳ ಪರಿಣಾಮ ಇಲ್ಲಿನ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೇಕಾರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ: ಸಾಂಪ್ರದಾಯಿಕ ನೇಕಾರಿಕೆಗೆ ಸವಾಲೊಡ್ಡಿರುವ ರೇಪಿಯರ್‌ ಮಗ್ಗದ ಸೀರೆಗಳ ಪರಿಣಾಮ ಇಲ್ಲಿನ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೇಕಾರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೇಕಾರಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಬಂದ್‌ ಸಂಪೂರ್ಣವಾಗಿತ್ತು. ಉಳಿದಂತೆ ಇತರೆ ಯಾವುದೇ ಚಟುವಟಿಕೆಗಳ ಮೇಲೆ ಬಂದ್‌ ಪರಿಣಾಮ ಇರಲಿಲ್ಲ. ಇಲ್ಲಿನ ನೇಯ್ಗೆ ಬೀದಿ, ದೇವರ ದಾಸಿಮಯ್ಯ ರಸ್ತೆ, ಕರೇನಹಳ್ಳಿ, ಚೈತನ್ಯನಗರ, ಕೊಂಗಾಡಿಯಪ್ಪ ಮುಖ್ಯರಸ್ತೆ, ಕುಚ್ಚಪ್ಪನಪೇಟೆ, ತೇರಿನಬೀದಿ, ಕಲ್ಲುಪೇಟೆ ಸುತ್ತಮುತ್ತ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನದವರೆಗೆ ಮುಚ್ಚಿದ್ದವು. ನೇಕಾರರು ಮಗ್ಗಗಳನ್ನು ಸ್ಥಗಿತಗೊಳಿಸಿ ಬಂದ್‌ನಲ್ಲಿ ಭಾಗಿಯಾಗಿದ್ದರು.

ಜನಜೀವನ ಅಬಾಧಿತ:

ಬಂದ್‌ ಸಹಜ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿತು. ಸಾರಿಗೆ ವ್ಯವಸ್ಥೆಯೂ ಎಂದಿನಂತೆ ಇತ್ತು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಸಹಜವಾಗಿಯೇ ರಸ್ತೆಗಿಳಿದಿದ್ದವು. ಆಟೋ ಚಾಲಕರು ಮತ್ತು ಮಾಲೀಕರ ಸಂಘ ಬಂದ್‌ ಬೆಂಬಲಿಸಿದ್ದರಿಂದ ಕೆಲ ಗಂಟೆಗಳು ಆಟೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಶಾಲಾ-ಕಾಲೇಜು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಚಟುವಟಿಕೆ ನಡೆಸಿದವು. ಕೃಷ್ಣ ರಾಜೇಂದ್ರ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟುಗಳು 11 ಗಂಟೆ ಬಳಿಕ ವಹಿವಾಟು ನಡೆಸಿದವು.

ಬೃಹತ್‌ ಪ್ರತಿಭಟನಾ ಸಮಾವೇಶ:

ನೇಕಾರ ಸಂಘಟನೆಗಳು ಇಲ್ಲಿನ ಸಿದ್ದಲಿಂಗಯ್ಯ ವೃತ್ತದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಿದವು. ನೂರಾರು ಸಂಖ್ಯೆಯಲ್ಲಿ ನೇಕಾರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು, ನೇಕಾರಿಕೆ ಉದ್ಯಮ ಎದುರಿಸುತ್ತಿರುವ ಸಂಕಷ್ಟಕ್ಕೆ ಸರ್ಕಾರ ದನಿಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್‌ ಮಗ್ಗ ನೇಕಾರರ ನೆರವಿಗೆ ಧಾವಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ವಿದ್ಯುತ್‌ ಮಗ್ಗ ಮೀಸಲು ಕಾಯ್ದೆ ತನ್ನಿ:

ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ನೇಕಾರಿಕೆ ಉದ್ಯಮಕ್ಕೆ ರೇಪಿಯರ್‌ ಮಗ್ಗಗಳು ಹಾಗೂ ಅದರ ಉತ್ಪನ್ನಗಳು ಮರಣ ಶಾಸನವಾಗಿವೆ. ಸೂರತ್‌ ಸೇರಿದಂತೆ ಹಲವೆಡೆಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ರೇಪಿಯರ್‌ ಸೀರೆಗಳ ಪರಿಣಾಮವಾಗಿ ಇಲ್ಲಿನ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಸೀರೆಗಳಿಂದಾಗಿ ಹಗಲಿರುಳು ಕಷ್ಟಪಟ್ಟು ನೇಕಾರಿಕೆಯಲ್ಲಿ ತೊಡಗಿರುವ ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಾಗಿದೆ. ಸರ್ಕಾರ ಈ ಕೂಡಲೇ ವಿದ್ಯುತ್‌ ಮಗ್ಗ ಮೀಸಲು ಕಾಯ್ದೆಯನ್ನು ಜಾರಿಗೆ ತರಬೇಕು. ಲಾಳಿ ಸಹಿತ ವಿದ್ಯುತ್‌ ಮಗ್ಗಗಳಲ್ಲಿ ನೇಯುವ ಸೀರೆಗಳನ್ನು ರೇಪಿಯರ್‌ ಮಗ್ಗಗಳಲ್ಲಿ ನೇಯದಂತೆ ಕಾನೂನು ಜಾರಿಗೊಳಿಸಬೇಕು. ಕೈಮಗ್ಗ ತಿದ್ದುಪಡಿ ಕಾಯ್ದೆಯ ರೀತಿಯಲ್ಲೇ ವಿದ್ಯುತ್‌ ಮಗ್ಗ ಮೀಸಲು ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಸೀರೆ ಖರೀದಿಸಲಿ:

ಸ್ಥಳೀಯವಾಗಿ ಉತ್ಪಾದಿಸಿದ ಸೀರೆಗಳಿಗೆ ಸ್ಥಳೀಯ ಮಾರುಕಟ್ಟೆ ಜಾಲವನ್ನು ವಿಸ್ತರಿಸಬೇಕು. ದೊಡ್ಡಬಳ್ಳಾಪುರದಲ್ಲಿ ಸುಸಜ್ಜಿತ ಸೀರೆ ಮಾರುಕಟ್ಟೆಯನ್ನು ಸರ್ಕಾರ ಆರಂಭಿಸಬೇಕು. ಶಾಲಾ ಸಮವಸ್ತ್ರ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುವ ಸೀರೆಗಳನ್ನು ನೇಕಾರರಿಂದಲೇ ಖರೀದಿ ಮಾಡಬೇಕು. ನೇಕಾರರು ಮಾರುಕಟ್ಟೆ ಇಲ್ಲದೆ ಕಂಗಾಲಾಗಿ ಮನೆಗಳಲ್ಲಿ ಸಂಗ್ರಹಿಸಿಟ್ಟಿರುವ ಸೀರೆಗಳನ್ನು ಸರ್ಕಾರ ಖರೀದಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ನಿಯಮಿತ ಕಾಲಮಿತಿಯಲ್ಲಿ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಂದ್‌ಗೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಟೆಕ್ಸ್‌ಟೈಲ್ಸ್ ವೀವರ್ಸ್ ಅಸೋಸಿಯೇಷನ್, ನೇಕಾರರ ಹೋರಾಟ ಸಮಿತಿ ಸೇರಿದಂತೆ ವಿವಿಧ ನೇಕಾರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಅಲ್ಲದೆ, ವಿವಿಧ ಸಂಘಟನೆಗಳು ಬಂದ್‌ಗೆ ಬಾಹ್ಯ ಬೆಂಬಲ ನೀಡಿದ್ದವು.

ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

5ಕೆಡಿಬಿಪಿ3- ನೇಕಾರ ಸಂಘಟನೆಗಳು ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

--

5ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ನೇಕಾರ ಸಂಘಟನೆಗಳು ಕರೆ ನೀಡಿದ್ದ ಬಂದ್‌ ವೇಳೆ ಸಾರಿಗೆ ಸಂಚಾರ ಎಂದಿನಂತೆ ಇತ್ತು.