ಸಮ್ಮೇಳನ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೇ ಜರುಗಲಿದೆಯೋ ಅಥವಾ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದ್ದು ಸಮ್ಮೇಳನ ಕುರಿತಾದ ಅನಿಶ್ಚಿತತೆ ಮುಂದುವರಿದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನಗರದಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ನಿಗದಿ ಎಂದು? ಸಮ್ಮೇಳನ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೇ ಜರುಗಲಿದೆಯೋ ಅಥವಾ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದ್ದು ಸಮ್ಮೇಳನ ಕುರಿತಾದ ಅನಿಶ್ಚಿತತೆ ಮುಂದುವರಿದಿದೆ.

ಬಳ್ಳಾರಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಜರುಗಿದ 87ನೇ ಸಮ್ಮೇಳನದಲ್ಲಿ ಘೋಷಿಸಲಾಯಿತು. ಅಂದರೆ ಬರೋಬ್ಬರಿ ಒಂದು ವರ್ಷ ಕಳೆದರೂ ಸಮ್ಮೇಳನ ಕುರಿತಾದ ಯಾವುದೇ ಪೂರಕ ತಯಾರಿ ನಗರದಲ್ಲಿ ನಡೆದಿಲ್ಲ. ಅಲ್ಲದೆ, ಸಾಹಿತ್ಯ ಪರಿಷತ್ ಸೇರಿದಂತೆ ಜಿಲ್ಲಾಡಳಿತ, ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸಮ್ಮೇಳನ ಕುರಿತಾಗಿ ಯಾವುದೇ ಆಸ್ಥೆ ವಹಿಸಲಿಲ್ಲ. ಹೀಗಾಗಿ, ಸಮ್ಮೇಳನ ನಿಗದಿತ ಅವಧಿಯಲ್ಲಿ ನಡೆಯದಿರುವುದು ಬಹುಮುಖ್ಯ ಕಾರಣ ಎನಿಸಿದ್ದು ಇದು ನಾಡಿನ ಸಾಹಿತ್ಯಾಸಕ್ತರು ಹಾಗೂ ಕನ್ನಡಪ್ರೇಮಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದಂತಾಗಿದೆ. ತಾಂತ್ರಿಕ ತೊಂದರೆ ಕಾರಣವೇ?

ಅಧಿಕಾರ ದುರ್ಬಳಕೆ, ಹಣಕಾಸು ದುರುಪಯೋಗ ಸೇರಿದಂತೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ಕಸಾಪದ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಕಸಾಪ ಅಧ್ಯಕ್ಷರ ಮೇಲಿನ ಆರೋಪಗಳ ಮೇಲಿನ ಕೋರ್ಟ್ ಪ್ರಕರಣ ಇತ್ಯರ್ಥವಾಗುವ ವರೆಗೆ ಸಮ್ಮೇಳನ ನಡೆಸಲು ಬರುವುದಿಲ್ಲವೇ? ಒಂದು ವೇಳೆ ಸರ್ಕಾರ ಸಮ್ಮೇಳನ ನಡೆಸಲು ನಿರ್ಧರಿಸಿದರೆ ಕಸಾಪ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮ್ಮೇಳನ ನಡೆಸಲು ಬರುತ್ತದೆಯೇ ಎಂಬ ಅನೇಕ ಗೊಂದಲಗಳಿವೆ.

ಸಾಹಿತ್ಯ ಪರಿಷತ್ತಿನ ಮೂಲಗಳ ಪ್ರಕಾರ ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲಿ ಎಂದೂ ಪರಿಷತ್ತಿನ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಈ ವರೆಗೆ ಸಮ್ಮೇಳನ ನಡೆದಿಲ್ಲ. ಬೈಲಾ ಪ್ರಕಾರ ಅಧ್ಯಕ್ಷರು ಇಲ್ಲದೇ ಹೋದರೆ ರಾಜ್ಯದ ಯಾವುದೇ ಜಿಲ್ಲೆಯ ಅಧ್ಯಕ್ಷರನ್ನು ಸಮ್ಮೇಳನದ ಮಟ್ಟಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ, ಸಮ್ಮೇಳನ ನಡೆಸಲಾಗುತ್ತದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಇದು ಎಷ್ಟರಮಟ್ಟಿಗೆ ಸಾಧ್ಯವಾಗಲಿದೆ ಎಂಬ ಕುತೂಹಲವೂ ಇದೆ. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಮೇಲಿನ ಆರೋಪಗಳ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಮೇಲೆಯೇ ಸಮ್ಮೇಳನದ ಮುಂದಿನ ನಿರ್ಧಾರ ನಿಂತಿದೆ. ಕೋರ್ಟ್ ತೀರ್ಪು ವಿಳಂಬವಾದರೆ ಸಮ್ಮೇಳನವೂ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸಿಎಂ ಭೇಟಿ ಮಾಡಲು ನಿರ್ಧಾರ

ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಇತ್ತೀಚೆಗೆ ಜಿಲ್ಲೆಯ ವಿವಿಧ ಮಠಾಧೀಶರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳು ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರು, ಕೂಡಲೇ ಸಮ್ಮೇಳನ ದಿನಾಂಕ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದ್ದರು. ಬೆಳಗಾವಿ ಅಧಿವೇಶನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಿರ್ಧರಿಸಿದ್ದು, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸಹ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಆದರೆ, ಇದಕ್ಕೆ ಸಿಎಂ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.

ಶಾಸಕರು ಸದನದಲ್ಲಿ ಧ್ವನಿ ಎತ್ತಲಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಸಮ್ಮೇಳನ ದಿನಾಂಕ ನಿಗದಿಗೆ ಒತ್ತಾಯಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯ ಶಾಸಕರ ನಿರಾಸಕ್ತಿಯಿಂದಾಗಿಯೇ ಸಮ್ಮೇಳನ ದಿನಾಂಕ ನಿಗದಿಗೆ ವಿಳಂಬವಾಗುತ್ತಿದೆ. ಜನಪ್ರತಿನಿಧಿಗಳ ಭಾಷಾಭಿಮಾನದ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ನಿಜಕ್ಕೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕನ್ನಡದ ಅಭಿಮಾನವಿದ್ದರೆ ಸದನದಲ್ಲಿ ಗಟ್ಟಿಯಾಗಿ ಮಾತನಾಡಲಿ. ಸರ್ಕಾರದ ಮೇಲೆ ಒತ್ತಡ ತರಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಧಿಕೃತ ಸಭೆ ಇಲ್ಲ

ಘೋಷಣೆಗೊಂಡು ಒಂದು ವರ್ಷ ಕಳೆದರೂ ಸಮ್ಮೇಳನ ತಯಾರಿಗಾಗಿ ಈ ವರೆಗೆ ಜಿಲ್ಲಾಡಳಿತ ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಜೊತೆ ಅಧಿಕೃತವಾಗಿ ಸಭೆ ನಡೆಸಿಲ್ಲ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೆಸರಿಗಷ್ಟೇ ಜಿಲ್ಲೆಯ ಸಚಿವರಾಗಿದ್ದು ಬಳ್ಳಾರಿಗೆ ಬರುವುದೇ ಅಪರೂಪ. ಹೀಗಾಗಿ, ಸಮ್ಮೇಳನದ ಕುರಿತಾದ ತಯಾರಿ ಸೇರಿದಂತೆ ಕನ್ನಡದ ಹಬ್ಬಕ್ಕೆ ಸೇರಿದಂತೆ ಪೂರಕ ನಿರ್ಧಾರಗಳನ್ನು ಈ ವರೆಗೆ ತೆಗೆದುಕೊಂಡಿಲ್ಲ. ಬಜೆಟ್‌ನಲ್ಲಿ ಸಮ್ಮೇಳನಕ್ಕೆಂದು ₹10 ಕೋಟಿ ಘೋಷಣೆ ಬಿಟ್ಟರೆ ಉಳಿದಂತೆ ಸರ್ಕಾರ ಮಟ್ಟದಲ್ಲಿ ಸಮ್ಮೇಳನ ಕುರಿತಾದ ನಿಲುವು, ನಿರ್ಧಾರಗಳು ಈವರೆಗೆ ಬಹಿರಂಗಗೊಂಡಿಲ್ಲ.ಅನುಮಾನ ಬೇಡ

ಸಮ್ಮೇಳನ ಬಳ್ಳಾರಿಯಲ್ಲಿಯೇ ನಡೆಯಲಿದೆ. ಯಾವುದೇ ಅನುಮಾನ ಬೇಡ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದ್ದೇವೆ. ಬೆಳಗಾವಿ ಅಧಿವೇಶನ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದ್ದಾರೆ.