6,279.87 ಕೋಟಿ ರು. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ವೆಚ್ಚದ ಬಿಲ್ ಬಾಕಿ ಪಾವತಿಗೆ 18.66 ಕೋಟಿ ರು., ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಂದ ಪಡೆಯಲಾಗಿದ್ದ 348.35 ಕೋಟಿ ರು. ಮರುಪಾವತಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹೆಲಿಕಾಪ್ಟರ್ ಪ್ರವಾಸಕ್ಕೆ 6.37 ಕೋಟಿ ರು. ಸಭಾಧ್ಯಕ್ಷ ಮತ್ತು ಸಭಾಪತಿ ಅವರ 68ನೇ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನದ ಪ್ರಯಾಣ ವೆಚ್ಚಕ್ಕೆ 2 ಕೋಟಿ ರು. ಸೇರಿದಂತೆ ಒಟ್ಟು 6,279.87 ಕೋಟಿ ರು. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು 2025-26ನೇ ಸಾಲಿನ ಎರಡನೇ ಕಂತಿನ ಪೂರಕ ಅಂದಾಜು ಮಂಡಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಗತ್ಯವಿದ್ದ ಸುಮಾರು 348 ಕೋಟಿ ರು. ಹಣವನ್ನು ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮಗಳ ‘ಪಿಡಿ ಖಾತೆ’ಯಿಂದ ಸುಮಾರು 197 ಕೋಟಿ ರು., ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ 5 ಕೋಟಿ ರು., ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮದಿಂದ ತಲಾ 3 ಕೋಟಿ ರು., ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ತಲಾ 70 ಕೋಟಿ ರು. ಪಡೆಯಲಾಗಿತ್ತು. ಆ ಮೊತ್ತವನ್ನು ಸದರಿ ನಿಗಮಗಳಿಗೆ ವಾಪಾಸ್ ನೀಡಲು ಈ ಪೂರಕ ಅಂದಾಜಿನಲ್ಲಿ ಹಣ ನೀಡಲಾಗಿದೆ.ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹೆಲಿಕಾಪ್ಟರ್ ಪ್ರವಾಸದ ವೆಚ್ಚ ಭರಿಸಲು ಹಾಗೂ ಮುಂದೆ ಬರಬಹುದಾದ ಬಿಲ್ಲುಗಳಿಗೆ 6.37 ಕೋಟಿ ರು., ಬಾರ್ಬಡೋಸ್ ಬ್ರಿಡ್ಜ್ ಟೌನ್‌ನಲ್ಲಿ ನಡೆದ 68ನೇ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಸಭಾಧ್ಯಕ್ಷ ಮತ್ತು ಸಭಾಪತಿಗಳ ಪ್ರಯಾಣ ವೆಚ್ಚಕ್ಕೆ ತಲಾ 1 ಕೋಟಿ ರು., ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳ ಕೂಲಿ ಬಾಕಿ ಹಣ ಪಾವತಿಗೆ 17.50 ಕೋಟಿ ರು., 78ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ 5 ಕೋಟಿ ರು. ಅನುದಾನವನ್ನು ಪೂರಕ ಅಂದಾಜಿನ 2ನೇ ಕಂತಿನಲ್ಲಿ ಒದಗಿಸಲಾಗಿದೆ.
ಪ್ರಮುಖ ಅಂಶಗಳು:* ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಖರ್ಚು ವೆಚ್ಚಗಳಿಗೆ ಹೆಚ್ಚುವರಿಯಾಗಿ 14.50 ಕೋಟಿ ರು.
* ಕನ್ನಡ ಹಾಗೂ ಕರ್ನಾಟಕ ಪ್ರಾದೇಶಿಕ ಭಾಷೆಯ ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನ ಮತ್ತು ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿತರಣೆ ವೆಚ್ಚ 18 ಕೋಟಿ ರು.*ಜಿಲ್ಲಾ/ ತಾಲ್ಲೂಕು/ ಹೋಬಳಿ ಮಟ್ಟದ ಸರ್ಕಾರದ ಪಂಚ ಗ್ಯಾರಂಟಿ ಫಲಾನುಭವಿಗಳ ಯೋಜನೆಗಳ ಸಮಾವೇಶ ಆಯೋಜನಾ ವೆಚ್ಚದ ಬಾಕಿ ಬಿಲ್ ಬಾಕಿ 18.66 ಕೋಟಿ ರು.
* 2025ನೇ ಸಾಲಿನ ಮೈಸೂರು ದಸರಾ ಉತ್ಸವ ಆಚರಣೆಗೆ 23.50 ಕೋಟಿ ಹಾಗೂ ತುಮಕೂರು ದಸರಾ ಉತ್ಸವಕ್ಕೆ 50 ಲಕ್ಷ ರು.* ರಾಜ್ಯಪಾಲರ ಸಚಿವಾಲಯದಲ್ಲಿ ಬಾಕಿ ಇರುವ ವಿವೇಚನಾಧೀನ ಬಿಲ್ ಗಳ ಪಾವತಿ ಹಾಗೂ ಮುಂಬರುವ ದಿನಗಳಲ್ಲಿ ಸ್ವೀಕೃತ ಆಗಬಹುದಾದ ಬಿಲ್ ಗಳಿಗೆ 50 ಲಕ್ಷ ರು.* ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇವರ ಕಚೇರಿ ಉಪಯೋಗಕ್ಕಾಗಿ ವಾಹನ ಖರೀದಿಸಲು 23 ಲಕ್ಷ ರು.
* ವನ್ಯ ಪ್ರಾಣಿಗಳಿಂದ ಉಂಟಾಗುವ ಹಾನಿ ಪ್ರಕರಣಗಳಿಗೆ ಪರಿಹಾರ ಪಾವತಿಸಲು 28 ಕೋಟಿ ರು.* ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 12 ಮಿನಿ ಬಸ್ ಖರೀದಿ ಹಾಗೂ 10 ಕಚೇರಿಗಳಿಗೆ ಮಾಸಿಕ ಬಾಡಿಗೆ ಆಧಾರದಡಿ ವಾಹನ ಪಡೆಯಲು 3.53 ಕೋಟಿ ರು.
* ಖಾಸಗಿ ದೇವಸ್ಥಾನ/ಮಠಗಳಿಗೆ ಅನುದಾನ ಬಿಡುಗಡೆಗೆ 7.5 ಕೋಟಿ ರು.* ವಿಧಾನ ಪರಿಷತ್‌ನ ಮಾಜಿ ಶಾಸಕರ ರೈಲ್ವೆ/ವಿಮಾನ ಪ್ರಯಾಣ ಭತ್ಯೆ ಪಾವತಿಗೆ 40 ಲಕ್ಷ ರು.
* ವಿಧಾನಸಭೆಯ ಶಾಸಕರ ಭವನಕ್ಕೆ ಹೊಸ ವಾಹನ ಖರೀದಿಸಲು 2 ಕೋಟಿ ರು.* ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರಿಗೆ ಹೊಸ ಕಾರು ಖರೀದಿಗೆ 18 ಲಕ್ಷ ರು.
* ಸರ್ಕಾರದ ಪ್ರಧಾನಿ ಕಾರ್ಯದರ್ಶಿ, ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ಹಾಗೂ ಸಮಾನಾಂತರ ಹುದ್ದೆ ಅಧಿಕಾರಿಗಳಿಗೆ 10 ಹೊಸ ಕಾರು ಖರೀದಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ 25 ಡಿ.ವಿ.ವಾಹನ ಖರೀದಿಗೆ 3.41 ಕೋಟಿ ರು.