ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಪುನೀತ ಓಲೇಕಾರ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಕಂದಕ ಸೃಷ್ಟಿಯಾಗುತ್ತಿದೆ. ಜೀವನದಲ್ಲಿ ಉತ್ತಮ ಮೌಲ್ಯ ಹಾಗೂ ಸಂಸ್ಕಾರ ರೂಢಿಸಿಕೊಳ್ಳಬೇಕಿದೆ ಎಂದರು.

ಶಿರಹಟ್ಟಿ: ಒಳಿತು ಬಯಸುವುದೇ ಎಲ್ಲಾ ಧರ್ಮಗಳ ಸಾರ ಆಗಿದೆ. ಕೆಡುಕು ಮಾಡಬೇಕು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಪಾವನವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ದೇವಕಿ ಅಕ್ಕನವರು ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷಕ್ಕಾಗಿ ಹೊಸ ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಲ್ಲ ಧರ್ಮಗಳು ಶಾಂತಿಯ ಸಂದೇಶವನ್ನು ನೀಡಿವೆ. ಅವುಗಳ ಆಚರಣೆಗಳಲ್ಲಿ ಕಾಣುವ ವ್ಯತ್ಯಾಸಗಳಿಂದಾಗಿ ಮತ್ತು ಮಾನವನ ಸ್ವಭಾವದಿಂದಾಗಿ ವಿವಾದಗಳು ಉದ್ಭವಿಸುತ್ತವೆ. ಎಲ್ಲ ಧರ್ಮಗಳ ಮೂಲತತ್ವಗಳು ಪ್ರೀತಿ, ಸಹಿಷ್ಣುತೆ ಮತ್ತು ಅಹಿಂಸೆಯಾಗಿದ್ದರೂ ಧರ್ಮದ ಆಧಾರದ ಮೇಲೆ ಗಲಭೆಗಳು, ಹಿಂಸೆ ಮತ್ತು ಭಿನ್ನಾಭಿಪ್ರಾಯಗಳು ಸಂಭವಿಸುತ್ತಿದ್ದು, ಶಾಂತಿ ಬೆಳೆಸುವಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಪುನೀತ ಓಲೇಕಾರ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಕಂದಕ ಸೃಷ್ಟಿಯಾಗುತ್ತಿದೆ. ಜೀವನದಲ್ಲಿ ಉತ್ತಮ ಮೌಲ್ಯ ಹಾಗೂ ಸಂಸ್ಕಾರ ರೂಢಿಸಿಕೊಳ್ಳಬೇಕಿದೆ. ಈ ಹಿಂದೆಲ್ಲ ಹಿರಿಯರು ಹೇಗೆ ಸಾಮರಸ್ಯದಿಂದ ಬಾಳಬೇಕು ಎಂಬುದನ್ನು ಅವಿಭಕ್ತ ಕುಟುಂಬದಲ್ಲಿ ಇದ್ದು ತೋರಿಸಿದ್ದಾರೆ ಎಂದು ಹೇಳಿದರು.

ಗಣ್ಯ ವರ್ತಕ ಪ್ರಕಾಶ ಭೋರಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಜಗದೀಶ ಸ್ವಾಮಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಖಲಂದರ ಕಬಾಡಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಬಸವರಾಜ ಸಂಗಪ್ಪಶೆಟ್ಟರ, ಶೈಲಾ ಅಕ್ಕನವರು, ಶಶಿಕಲಾ ಹಿರೇಮಠ ಇದ್ದರು.