ಕನ್ನಡಪ್ರಭ ವಾರ್ತೆ ಉಡುಪಿ
2022ರಲ್ಲಿ ಇಲ್ಲಿನ ಮಂಚಿಕುಮೇರಿ ಎಂಬಲ್ಲಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಂಚಿಕುಮೇರಿಯ ನಿವಾಸಿಗಳಾದ, ಸಂತ್ರಸ್ಥೆಯ ಅಕ್ಕಮ ಮಗ ಮಿಥುನ್ ಮತ್ತು ಆತನ ಗೆಳೆಯ ನಾಗೇಶ್ ಜೀವಾವಧಿ ಶಿಕ್ಷೆಗೊಳದಾವರು. ಅವರು 2022ರ ಫೆ. 18ರಂದು ಮುಂಚಿಕುಮೇರಿಯ ರಮಾನಾಥ ರೈ ಎಂಬವರ ಪತ್ನಿ ಸುಮತಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ರಮಾನಾಥ ರೈ ಅವರು ಮನೆಯಿಂದ ಹೊರಗೆ ಹೋಗಿದ್ದಾಗ ಮಿಥುನ್ ಹಾಗೂ ನಾಗೇಶ್ ಮನೆಗೆ ಬಂದ್ದಿದ್ದರು, ಪರಿಚಯದ ಕಾರಣದಿಂದ ಸುಮತಿ ಬಾಗಿಲು ತೆರೆಯುತ್ತಿದ್ದಂತೆ ಇಬ್ಬರು ಒಳನುಗ್ಗಿ, ಅವರನ್ನು ಗಟ್ಟಿಯಾಗಿ ಹಿಡಿದು ಕುತ್ತಿಗೆ ಹಿಸುಕಿದರು. ಸುಮತಿ ಪ್ರಜ್ಞೆ ಕಳೆದುಕೊಂಡ ಅವರನ್ನು ಚೀಲದೊಳಗೆ ಹಾಕಿ ಕಟ್ಟಿ, ಮೂಟೆಯನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ, ಅಲ್ಲಿಂದ ಸ್ಥಳಾಂತರಿಸಲು ಯತ್ನಿಸಿದರು. ಆಗ ಮನೆಗೆ ಬಂದ ರಮಾನಾಥ ರೈ ಬಾಗಿಲು ತಟ್ಟಿದಾಗ ಆರೋಪಿಗಳು ಬಾಗಿಲು ತೆರೆಯದೇ ಹಿಂಬಾಗಿಲಿನಿಂದ ಓಡಿಹೋಗಲು ಪ್ರಯತ್ನಿಸಿದರು. ಆಗ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಳಿಕ ಸೂಟ್ಕೇಸ್ ತೆರೆಯುವಾಗ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಅವರು ಚೇತರಿಸಿಕೊಂಡರು.ಈ ಬಗ್ಗೆ ಅಂದಿನ ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ ಅವರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ, ಕಲಂ 449 ಮತ್ತು 307ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 20,000 ರು. ದಂಡ ವಿಧಿಸಿದರು. ಜೊತೆಗೆ ಕಲಂ 325ರಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5,000 ದಂಡ, ಅದರಲ್ಲಿ 45,000 ರು.ಗಳನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.