ಗುರು ಶಿಷ್ಯ ಸಂಬಂಧ ಕೃಷ್ಣಾರ್ಜುನರಂತೆ ಇರಬೇಕು. ಕೃಷ್ಣ ಮತ್ತು ಅರ್ಜುನರು ಸಮಯದ ಅಗತ್ಯಕ್ಕೆ ತಕ್ಕಂತೆ ಸ್ನೇಹಿತ, ಸಹೋದರ ಹಾಗೆಯೇ ಗುರುಗಳಾಗುತ್ತಿದ್ದರು. ಗುರುಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಸಮಾನರು. ವಿದ್ಯಾರ್ಥಿಗಳು ವರ್ಷಕ್ಕೊಮ್ಮೆಯಾದರೂ ತಮ್ಮ ಗುರುಗಳನ್ನು ನೆನೆದು ಮಾತನಾಡಿಸಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಆರ್. ಪೈ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಗುರು ಶಿಷ್ಯ ಸಂಬಂಧ ಕೃಷ್ಣಾರ್ಜುನರಂತೆ ಇರಬೇಕು. ಕೃಷ್ಣ ಮತ್ತು ಅರ್ಜುನರು ಸಮಯದ ಅಗತ್ಯಕ್ಕೆ ತಕ್ಕಂತೆ ಸ್ನೇಹಿತ, ಸಹೋದರ ಹಾಗೆಯೇ ಗುರುಗಳಾಗುತ್ತಿದ್ದರು. ಗುರುಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಸಮಾನರು. ವಿದ್ಯಾರ್ಥಿಗಳು ವರ್ಷಕ್ಕೊಮ್ಮೆಯಾದರೂ ತಮ್ಮ ಗುರುಗಳನ್ನು ನೆನೆದು ಮಾತನಾಡಿಸಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಆರ್. ಪೈ ತಿಳಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅವರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ನಂತರ ಕಾಲೇಜಿನ 21ನೆಯ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಪ್ರೊ. ವನಿತ ಮಯ್ಯರಿಗೆ ಸನ್ಮಾನ ಹಾಗೂ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರೊ. ವನಿತ ಮಯ್ಯರ ಕಾಳಜಿ, ವಿದ್ಯಾರ್ಥಿಗಳನ್ನು ನೋಡುವ ರೀತಿ ಹಾಗೂ ಸಮಯಪಾಲನೆಗೆ ಕೊಡುವ ಮಹತ್ವ, ಸಹಾಯ, ಸಹಾನುಭೂತಿಯ ಬಗ್ಗೆ ಮಾತನಾಡಿದರು. ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಡಾ. ಟಿ. ಸತೀಶ್ ಯು. ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪ್ರೊ. ವನಿತ ಮಯ್ಯರ ಪತಿ ಗಣೇಶ್ ಮಯ್ಯ, ನಿಯೋಜಿತ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ, ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿದೇವಿ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ, ಐಕ್ಯೂಎಸಿ ಸಂಯೋಜಕಿ ಪ್ರೊ. ಶೈಲಜಾ ಹೆಚ್., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ವೀರಾ ಐಡಾ ಪಿಂಟೋ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಪೂ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಅಶ್ವಿನಿ ಶೆಟ್ಟಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಂ. ಚೆನ್ನ ಪೂಜಾರಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.