ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟ ಹಾಗೂ ಕೊಡಗು ಗೌಡ ಯುವ ವೇದಿಕೆಯ ಸಹಯೋಗದಲ್ಲಿ ನಗರದಲ್ಲಿ 2ನೇ ವರ್ಷದ ಗೌಡ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೊಂಡಿತು.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮರಗೋಡಿನ ಕೃಷಿ ಸಾಧಕರು ಹಾಗೂ ಕಾಫಿ ಬೆಳೆಗಾರರಾದ ಕಟ್ಟೆಮನೆ ಪ್ರೇಮಾ ಗಣೇಶ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸುತ್ತಿದ್ದಾರೆ. ಅಗತ್ಯ ಸಹಕಾರ ನೀಡಿದರೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗೌಡ ಪರಂಪರೆ ಉಳಿಸಿ ಬೆಳೆಸಲಾಗುವುದುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮೂಟೇರ ಪುಷ್ಪಾವತಿ ರಮೇಶ್, ಒಕ್ಕೂಟದ ಮೂಲಕ ಗೌಡ ಸಮುದಾಯದ ಮಕ್ಕಳಲ್ಲಿ ಗೌಡ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಅರಿವು ಮೂಡಿಸಿ ಗೌಡ ಪರಂಪರೆಯನ್ನು ಉಳಿಸಿ ಬೆಳೆಸಲಾಗುವುದು ಎಂದು ತಿಳಿಸಿದರು.
ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಗೌಡ ಸಮುದಾಯವನ್ನು ಒಗ್ಗೂಡಿಸುವ ಮತ್ತು ಗೌಡ ಜನಾಂಗದ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟವನ್ನು ನೂತನವಾಗಿ ರಚಿಸಲಾಗಿದೆ. ಈ ಸಂಘಟನೆಯ ಮೂಲಕ ಕೊಡಗು ಜಿಲ್ಲೆಯ ಅರೆಭಾಷಿಕ, ಒಕ್ಕಲಿಗ ಮಹಿಳೆಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರನ್ನು ಒಗ್ಗೂಡಿಸಲಾಗಿದೆ ಎಂದು ಹೇಳಿದರು.ಎಲ್ಲರ ಸಹಕಾರ ಅಗತ್ಯ
ಗೌಡ ಜನಾಂಗದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವ ಉದ್ದೇಶವನ್ನು ಮಹಿಳಾ ಒಕ್ಕೂಟ ಹೊಂದಿದ್ದು, ಇದು ಪ್ರಥಮ ಹೆಜ್ಜೆಯಾಗಿದೆ. ಸಂಘದ ಸದಸ್ಯತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದ್ದು, ಮುಂದಿನ ದಿನಗಳಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟ ಹಾಗೂ ಕೊಡಗು ಗೌಡ ಯುವ ವೇದಿಕೆಯ ಸಹಯೋಗದಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದ್ದು, ಸಮುದಾಯದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯನಗರಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯುದಯ ಸಾಧಿಸುತ್ತಿದ್ದಾರೆ. ಗೌಡ ಮಹಿಳೆಯರಿಗೆ ಗೌಡ ಸಮುದಾಯ ಬಾಂಧವರಿಂದ ಅಗತ್ಯ ಪೋತ್ಸಾಹ ದೊರೆಯುತ್ತಿದೆ. ಮಹಿಳೆಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದರು.
ಕಾಫಿ ಬೆಳೆಗಾರರಾದ ದಂಬೆಕೋಡಿ ಲೀಲಾ ಚಿಣ್ಣಪ್ಪ ಮಾತನಾಡಿ, ಕ್ರೀಡೆಗೆ ವಯಸ್ಸಿನ ಅಂತರವಿಲ್ಲ, ಎಲ್ಲರೂ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ತಂಡಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ವಿನುತ ಪಾತಿಕಲ್ಲು ಸುಳ್ಯ ಮಾತನಾಡಿ, ಗೌಡ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಯಾಗಬೇಕಾದರೆ ಎಲ್ಲರೂ ಸಂಘಟಿತರಾಗುವುದು ಮುಖ್ಯ, ಇದಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಹೇಳಿದರು.ಕಾಫಿ ಬೆಳೆಗಾರರಾದ ಮೂಟೇರ ಬೀನಾ ಸ್ಟಾರ್‌ಸನ್, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಅಶ್ವಿನಿ ಕೃಷ್ಣಕಾಂತ್ ಹಾಗೂ ಸಂಘಟನಾ ಕಾರ್ಯದರ್ಶಿ ತೋಟಂಬೈಲು ಪ್ರೇಮ ಆನಂದ ಉಪಸ್ಥಿತರಿದ್ದರು.
ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಕೋಶಾಧಿಕಾರಿ ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಕಾವ್ಯಶ್ರೀ ಕಪಿಲ್ ದುಗ್ಗಳ ನಿರೂಪಿಸಿದರು. ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಸಹ ಸಂಚಾಲಕ ಪರಿಚನ ಸೋನಿ ಶರತ್ ವಂದಿಸಿದರು.ಸನ್ಮಾನ: ಸಮುದಾಯದ ಬೆಳವಣಿಗೆಗೆ ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲು ಕಾರಣಕರ್ತರಾದ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 2023-24ನೇ ಸಾಲಿನಲ್ಲಿ ಕೊಡಗು ಗೌಡ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ಕೊಡಗು ಗೌಡ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.